ಲಕ್ನೋ, ಎ.05 (Daijiworld News/MB) : ಇಂಗ್ಲೆಂಡ್ನಿಂದ ಮರಳಿದ ಬಳಿಕ ಕೊರೊನಾ ವೈರಸ್ ದೃಢ ಪಟ್ಟ ಕಾರಣದಿಂದಾಗಿ ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಿಗೆ 6ನೇ ಬಾರಿ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ.
ಕಳೆದ 5 ಬಾರಿಯ ಪರೀಕ್ಷೆಯಲ್ಲೂ ಕನಿಕಾ ಅವರಲ್ಲಿ ವೈರಸ್ ದೃಢಪಟ್ಟಿತ್ತು. ಆದರೆ, ಇದೀಗ 6ನೇ ಬಾರಿಯ ಪರೀಕ್ಷೆಯಲ್ಲಿ ವೈರಸ್ ಇಲ್ಲ ಎಂದು ವರದಿ ತಿಳಿಸಿದೆ.
ಪ್ರತಿ 48 ಗಂಟೆಗಳಿಗೊಮ್ಮೆ ಕನಿಕಾ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಈಗ ವೈರಸ್ ಇಲ್ಲ ಎಂಬ ವರದಿ ಬಂದಿದ್ದರೂ ಇನ್ನೊಂದು ಪರೀಕ್ಷೆಯಲ್ಲಿ ವೈರಸ್ ನೆಗೆಟಿವ್ ವರದಿ ಬರುವವರೆಗೂ ಕನಿಕಾ ಅವರು ಆಸ್ಪತ್ರೆಯಲ್ಲಿಯೇ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಕನಿಕಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಂತೆ ಪಡುವಂತಹ ಯಾವುದೇ ಅನಿವಾರ್ಯತೆಯಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.