ಮುಂಬೈ, ಎ.04 (Daijiworld News/MB) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತದಾದ್ಯಂತ ಲಾಕ್ಡೌನ್ ಮಾಡಲಾಗಿದ್ದು ಕೊರೊನಾ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ನಿಟ್ಟಿನಲ್ಲಿ ಅನೇಕ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದರು. ಆದರೆ ಬಾಲಿವುಡ್ ಬಾದ್ಷಾ ಶಾರೂಖ್ ಖಾನ್ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ನೆರವಿಗೆ ಮುಂದೆ ಬಂದಿಲ್ಲ ಎಂಬ ಟೀಕೆಗಳು ಕೇಳಿ ಬಂದಿತ್ತು. ಇದೀಗ ಈ ಟೀಕೆಗಳಿಗೆ ಬ್ರೇಕ್ ಹಾಕಿರುವ ಶಾರೂಕ್ ಖಾನ್ ಒಂದರ ಬಳಿಕ ಒಂದು ನೆರವನ್ನು ಘೋಷಿಸಿದ್ದಾರೆ.
ದೇಶಕ್ಕೆ ತಮ್ಮ ವಿವಿಧ ಫೌಂಡೇಷನ್ಗಳು, ಫ್ರಾಂಚೈಸಿಗಳ ಮೂಲಕ ಸಹಾಯ ಮಾಡುವುದಾಗಿ ಶಾರೂಕ್ ಹೇಳಿದ್ದು ಪ್ರಧಾನಿ ಹಾಗೂ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗಳಿಗೂ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಕಿಂಗ್ ಖಾನ್ ಮಹಾರಾಷ್ಟ್ರದ ಸಿಎಂ ಪರಿಹಾರ ನಿಧಿಗೆ ದೇಣಿಗೆ ಹಾಗೆಯೇ ಮುಂಬೈ ನಗರದಲ್ಲಿನ ಬಡವರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಈ ನೆರವಿಗೆ ಮಹಾರಾಷ್ಟ್ರ ಸಿಎಂ, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದರು.
ಪ್ರಧಾನ ಮಂತ್ರಿ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಾರೂಖ್ ದೇಣಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
ಕೆಕೆಆರ್ ಮತ್ತು ಮೀರ್ ಫೌಂಡೇಷನ್ ವತಿಯಿಂದ 50,000 ಆರೋಗ್ಯ ಕಿಟ್, ರೋಟಿ ಫೌಂಡೇಷನ್, ಮೀರ್ ಫೌಂಡೇಷನ್ ಕಡೆಯಿಂದ 3 ಲಕ್ಷ ಊಟದ ಕಿಟ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಅರ್ಥ್ ಫೌಂಡೇಷನ್, ಮೀರ್ ಫೌಂಡೇಷನ್ ಮೂಲಕ ಮುಂಬೈ ಒಂದರಲ್ಲಿಯೇ 5,500 ಮಂದಿಗೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪ್ರತಿದಿನ 2000 ಜನರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನೀಡಿದ ಕರೆಗೆ ನಟ ಅಕ್ಷಯ್ ಕುಮಾರ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಕುಸ್ತಿಪಟು ಭಜರಂಗ್ ಪೂನಿಯಾ ಸೇರಿದಂತೆ ಹಲವರು ದೇಣಿಗೆ ನೀಡಿದ್ದಾರೆ. ಸಲ್ಮಾನ್ ಖಾನ್ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ 25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ಮುಂದಾಗಿದ್ದಾರೆ.