ಜೋರ್ಡಾನ್, ಎ.02 (Daijiworld News/MB) : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ಗೆ ಆದೇಶ ನೀಡಿದ್ದು ಮಲಯಾಳಂ ಸಿನಿಮಾ ನಿರ್ದೇಶಕ ಬ್ಲೇಸೈ, ಸ್ಟಾರ್ ನಟ ಪ್ರಥ್ವಿರಾಜ್ ಸುಕುಮಾರನ್ ಸೇರಿದಂತೆ ಚಿತ್ರತಂಡದ 58 ಮಂದಿ ಜೋರ್ಡಾನ್ನಲ್ಲಿ ಬಾಕಿಯಾಗಿದ್ದಾರೆ.
ಪ್ರಥ್ವಿರಾಜ್ ಅಭಿನಯದ ಆದುಜೀವಿತಂ ಸಿನಿಮಾದ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಜೋರ್ಡಾನ್ಗೆ ತೆರಳಿದ್ದು ಆ ಸಂದರ್ಭದಲ್ಲೇ ಕೊರೊನಾ ಕಾರಣದಿಂದಾಗಿ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅತ್ತ ಶೂಟಿಂಗ್ ಇಲ್ಲದೇ ಇತ್ತ ಬರಲು ಆಗದೇ ಈ ತಂಡ ಅಲ್ಲೇ ಬಾಕಿ ಉಳಿದಿದೆ ಎಂದು ವರದಿ ತಿಳಿಸಿದೆ.
ಈ ನಡುವೆ ಜೋರ್ಡಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಅನಿವಾಸಿ ಕೇರಳಿಯರ ಇಲಾಖೆ ಗುರುವಾರ ಸಂಪರ್ಕಿಸಿ, ಮಲಯಾಳಂ ಸಿನಿಮಾ ನಟ ಪೃಥ್ವರಾಜ್ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೇಸೈ ಮತ್ತು ಸಿಬ್ಬಂದಿಗಳ ಕುರಿತಾಗಿ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.
ಜೋರ್ಡಾನ್ನಲ್ಲಿರುವ ಭಾರತೀಯ ರಾಯಬಾರಿಯ ಬಳಿ ಮಾತನಾಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅನಿವಾಸಿ ಕೇರಳಿಯರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ತಿಳಿಸಿದ್ದು ಅವರು ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿಯನ್ನು ರಾಯಭಾರಿ ಕಚೇರಿ ನೀಡಿದೆ.
ಸಿನಿಮಾ ನಿರ್ದೇಶಕ ಬ್ಲೇಸೈ ಕೊರೊನಾ ಹಿನ್ನಲೆಯಿಂದಾಗಿ ಚಿತ್ರೀಕರಣ ಮಾಡುವುದಿಲ್ಲ ಎಂದು ತಿಳಿಸಿದ್ದು ಪರಿಸ್ಥಿತಿ ಸಹಜವಾದ ಬಳಿಕ ಸಿನಿಮಾದ ಚಿತ್ರೀಕರಣ ನಡೆಸುವುದಾಗಿ ತಿಳಿಸಿದ್ದಾರೆ.
ಪೃಥ್ವಿರಾಜ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.