ಬೆಂಗಳೂರು, ಮಾ.27 (Daijiworld News/MB) : ರಾಮಾಯಾಣ ಧಾರಾವಾಹಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ರಮಾನಂದ್ ಸಾಗರ್ ನಿರ್ದೇಶನದ "ರಾಮಾಯಣ" ದಾರಾವಾಹಿ ಇಂದಿಗೂ ತನ್ನ ಜನಪ್ರಿಯವಾಗಿದ್ದು ಕೊರೊನಾ ವೈರಸ್ ಹಿನ್ನಲೆಯಲ್ಲಿ ಜನರು ಮನೆಯಲ್ಲಿಯೇ ಇರುತ್ತಾರೆ. ಹಾಗಾಗಿ "ರಾಮಾಯಣ" ಧಾರಾವಾಹಿಯನ್ನು ಮತ್ತೆ ಟಿವಿಯಲ್ಲಿ ಪ್ರಸಾರ ಮಾಡಬೇಕು ಈಗಿನ ಪೀಳಿಗೆ ಧಾರಾವಾಹಿಯನ್ನು ನೋಡುವ ಮೂಲಕ ರಾಮಾಯಣದ ಬಗ್ಗೆ ತಿಳಿಯಬಹುದು ಎಂಬ ಮನವಿಗಳು ಕೂಡಾ ಕೇಳಿ ಬರುತ್ತಿದೆ. ಇದೀಗ ಜನರ ಒತ್ತಾಯದ ಮೇರೆಗೆ "ರಾಮಾಯಣ" ಧಾರಾವಾಹಿ ದೂರದರ್ಶನದಲ್ಲಿ ಧಾರಾವಾಗಿ ಮರುಪ್ರಸಾರ ಆಗುವುದು ಖಚಿತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಾರ್ವಜನಿಕ ಬೇಡಿಕೆಯ ಮೇರೆಗೆ, ನಾಳೆ, ಮಾರ್ಚ್ 28ರಿಂದ ಡಿಡಿ ನ್ಯಾಷನಲ್ನಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 9 ರಿಂದ 10 ರವರೆಗೆ ಒಂದು ಎಪಿಸೋಡ್ ಹಾಗೂ ರಾತ್ರಿ 9 ರಿಂದ 10 ರವರೆಗೆ ಮತ್ತೊಂದು ಎಪಿಸೋಡ್ ನಂತೆ ಪ್ರಸಾರ ಮಾಡಲಾಗುವುದು ಎಂದು ಘೋಷಿಸಲು ಸಂತೋಷವಾಗಿದೆ ಎಂದು ಹೇಳಿದ್ದಾರೆ.
1987-88ರ ಅವಧಿಯಲ್ಲಿ ಪ್ರಸಾರ ಕಂಡಿದ್ದ "ರಾಮಾಯಣ"ಧಾರಾವಾಹಿಗೆ ರಮಾನಂದ್ ಸಾಗರ್ ನಿರ್ದೇಶನ ಇದ್ದು ಅರುಣ್ ಗೋವಿಲ್ ರಾಮನಾಗಿ, ದೀಪಿಕಾ ಸೀತೆಯಾಗಿ, ಸುನಿಲ್ ಲಹರಿ, ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಆಗಿದ್ದು ಈ ಸಮಯದಲ್ಲಿ ಧಾರಾವಾಹಿ ಮರುಪ್ರಸಾರ ಕಾಣುತ್ತಿರುವುದು ಧಾರಾವಾಹಿ ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.