ಬೆಂಗಳೂರು, ಮಾ.23 (Daijiworld News/MB) : ಕೊರೊನಾ ವೈರಸ್ ಬಗ್ಗೆ ಅವೈಜ್ಞಾನಿಕ ವಿಚಾರಗಳನ್ನು ಹರಡಬೇಡಿ ಎಂದು ಆ ದಿನಗಳು, ಮೈನಾ ಖ್ಯಾತಿಯ ಸಾಮಾಜಿಕ ಹೋರಾಟಗಾರನು ಆದ ನಟ ಚೇತನ್ ಕುಮಾರ್ ಕಿಚ್ಚ ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದಾರೆ.
ಭಾನುವಾರ ನಟ ಸುದೀಪ್ ಅವರು ವಿಡಿಯೋ ಒಂದನ್ನು ಟ್ವೀಟ್ ಮಾಡಿ, "ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ" ಎಂದು ಬರೆದುಕೊಂಡಿದ್ದರು
ಹಾಗೆಯೇ ಇದರಲ್ಲಿ ಒಂದು ವಿಡಿಯೋ ಕೂಡಾ ಇದ್ದು ಆ ವಿಡಿಯೋದಲ್ಲಿ ಯುವತಿಯೊಬ್ಬರು ಮಾತನಾಡುತ್ತಾ, ಚಪ್ಪಾಳೆ ತಟ್ಟುವುದನ್ನ ತುಂಬಾ ಲಘುವಾಗಿ ಪರಿಗಣಿಸಬೇಡಿ. ದಯವಿಟ್ಟು ಎಲ್ಲರೂ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಲು ಭಾಗವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂದೇಶದಿಂದ ಎನರ್ಜಿ ಮೆಡಿಸಿನ್ ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಸೋಣ. ನಿಮ್ಮ ಬಾಲ್ಕನಿ, ಮನೆಯಲ್ಲಿ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ. ನಿಮಗಾಗಿ ಶ್ರಮಿಸುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿ" ಎಂದು ಮನವಿ ಮಾಡಿಕೊಂಡಿದ್ದರು
ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್, ಚಿತ್ರರಂಗದಲ್ಲಿ ನೀವು ಮಾಡಿರುವ ಕೆಲಸವನ್ನು ಮತ್ತು ಸಾಧನಗಳನ್ನು ನಾನು ಗೌರವಿಸುತ್ತೇನೆ. ಅಪ್ಪ, ಅಮ್ಮ ಇಬ್ಬರು ವೈದ್ಯರ ಮಗನಾಗಿ, ವೈದ್ಯರಿಗೆ ಪ್ರತಿಯೊಬ್ಬರು ಗೌರವವನ್ನು ನೀಡಬೇಕಾಗುತ್ತದೆ ಅದನ್ನು ನಾನು ಒಪ್ಪುತ್ತೇನೆ. ಆದರೆ ಈ ರೀತಿಯ ಅವೈಜ್ಞಾನಿಕವಾದಂತಹ ವಿಚಾರಗಳು (ಎನರ್ಜಿ ಮೆಡಿಸಿನ್) ನಮ್ಮನ್ನು ತಪ್ಪುದಾರಿಗೆ ಕರೆದೊಯ್ಯುವುದಲ್ಲದೇ, ಮೌಢ್ಯವನ್ನು ಬಿತ್ತುತ್ತವೆ. ಕೊರೊನಾ ವೈರಸ್ ವಿರುದ್ಧ ಹೋರಾಡೋಣ, ವೈಜ್ಞಾನಿಕವಾಗಿ ಎಂದು ಹೇಳಿದ್ದಾರೆ.