ಮಂಗಳೂರು, ಮಾ.19 (Daijiworld News/MB) : ಕೆ ಬಿ ಪ್ರವೀಣ್ ನಿರ್ದೇಶನದ ಕರಾವಳಿ ಪ್ರದೇಶದ ದೈವಾರಾದನೆ ಬಗ್ಗೆ 'ಪಂಜುರ್ಲಿ' ಎಂಬ ಕನ್ನಡ ಕಿರುಚಿತ್ರ ಯುಟ್ಯೂಬ್ನಲ್ಲಿ 30 ಸಾವಿರ ವೀಕ್ಷಣೆಗಳನ್ನು ಗಳಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪಂಜುರ್ಲಿ ಕಿರುಚಿತ್ರದಲ್ಲಿ ಕರಾವಳಿಯ ಸುಂದರ ಸಂಸ್ಕೃತಿ ಹಾಗೂ ಕರಾವಳಿಯ ದೈವಾರಾದನೆ ಕುರಿತಾಗಿ ಬಹಳ ಮನೋಜ್ಞವಾಗಿ ಚಿತ್ರಣ ನೀಡಲಾಗಿದೆ.
ಈ ಕಿರುಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ಕೆವಿಆರ್, ಕೆ ಬಿ ಪ್ರವೀಣ್, ವಿ ಜೆ ದೀಪಕ್ ಭಟ್, ಶ್ರೀಶಾ ತಮಂಕರ್, ದೀಪಕ್ ಹೆಬ್ಬಾರ್, ಸಚಿನ್ ಲೊಂದೆ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಿರ್ದೇಶಕ ಕೆ ಬಿ ಪ್ರವೀಣ್ ದಾಯ್ಜಿವರ್ಲ್ಡ್ ಜೊತೆ ಮಾತನಾಡಿ, "ಈ ಕಿರುಚಿತ್ರವನ್ನು ಕುದುರೆಮುಕ, ಮುಲ್ಲೂರು, ಮಾಲಾ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು ಇದನ್ನು ಕೇವಲ ಮೂರು ದಿನಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದ ವಿಶೇಷತೆಯೆಂದರೆ ನಾವು ಈ ಕಿರುಚಿತ್ರವನ್ನು ನೈಸರ್ಗಿಕ ಬೆಳಕಿನಲ್ಲಿ ಚಿತ್ರೀಕರಿಸಿದ್ದೇವೆ ಮತ್ತು ಚಲನಚಿತ್ರದಲ್ಲಿ ನೈಸರ್ಗಿಕ ವಾತಾವರಣವನ್ನು ಸೃಷ್ಟಿಸಲು ನಾವು ಬಯಸಿದಂತೆ ಧ್ವನಿ ವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ ಎಂದು ಹೇಳಿದ್ದಾರೆ.
"ಇತರ ಪ್ರದೇಶದ ಜನರಿಗೆ ದೈವಾರಾಧನೆ ಮತ್ತು ಅದರ ನಂಬಿಕೆಯ ಬಗ್ಗೆ ತಿಳಿದಿಲ್ಲ, ಆದ್ದರಿಂದ ಈ ಚಲನಚಿತ್ರವು ಅವರಿಗೆ ಹೊಸ ಅನುಭವವಾಗುತ್ತದೆ. ನಾವು ಈ ಚಿತ್ರವನ್ನು ಸಾಕ್ಷ್ಯಚಿತ್ರ ರೂಪದಲ್ಲಿ ಮಾಡಿಲ್ಲ, ಆದರೆ ಇದು ಮನರಂಜಾತ್ಮಕವಾಗಿದ್ದು ಜನರಿಗೆ ರೋಮಾಂಚಕತೆ ಮೂಡಿಸುತ್ತದೆ. ಈ ಕಿರುಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು ಇದು ಕಡಿಮೆ ಬಜೆಟ್ನಲ್ಲಿ ಉತ್ತಮ ಮೂಡಿಬಂದಿದೆ ಎಂದಿದ್ದಾರೆ.
ಚಿತ್ರವನ್ನು ನಿರ್ದೇಶಿಸುವುದರ ಹೊರತಾಗಿ, ಕಾರ್ಕಳ ಮೂಲದ ಕೆ ಬಿ ಪ್ರವೀಣ್ ಅವರು ಕಥೆಯನ್ನು ಬರೆದಿದ್ದಾರೆ, ಹಿನ್ನೆಲೆ ಸಂಗೀತ ಮತ್ತು ಚಿತ್ರಕ್ಕೆ ಧ್ವನಿ ವಿನ್ಯಾಸವನ್ನು ಸಂಯೋಜಿಸಿದ್ದಾರೆ. ಕೆ ಬಿ ಪ್ರವೀಣ್ ಅವರು ಆಪರೇಷನ್ ಅಲಮೇಲಮ್ಮ, ಮಾಯಾಬಜಾರ್, ಲಂಡನ್ನಲ್ಲಿ ಲಂಬೋದರ ಚಿತ್ರದಲ್ಲಿ ನಟಿಸಿದ್ದು ಅವರು ನಟಿಸಿರುವ ದಾಮಾಯಾಣ ಸಿನಿಮಾ ಇನ್ನಷ್ಟೆ ತೆರೆಕಾಣಬೇಕಿದೆ. ಹಾಗೆಯೇ ಅವರು ಕನ್ನಡ ಚಿತ್ರ ಮುಮ್ತಾಜ್ ಹಾಗೂ ದಾಮಾಯಾಣಕ್ಕೆ ಹಿನ್ನೆಲೆ ಸಂಗೀತವನ್ನೂ ಸಂಯೋಜಿಸಿದ್ದಾರೆ.
ಪಂಜುರ್ಲಿ ಕಿರುಚಿತ್ರವು ಅತ್ಯುತ್ತಮ ನಟನೆ ಮತ್ತು ಛಾಯಾಗ್ರಹಣಕ್ಕಾಗಿ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದು ಮೈಸೂರಿನಲ್ಲಿ ನಡೆದ ರೆಡ್ ಎಫ್ಎಂ ಕಿರುಚಿತ್ರ ಪ್ರಶಸ್ತಿಗಳಲ್ಲಿ 2020 ರ ಅತ್ಯುತ್ತಮ ಸಂಗೀತ ಮತ್ತು ಸಂಪಾದನೆಗಾಗಿ ನಾಮನಿರ್ದೇಶನಗೊಂಡಿದೆ.
ಸಂಭಾಷಣೆಯನ್ನು ಕೆ ಬಿ ಪವನ್ ಬರೆದಿದ್ದು, ಪ್ರಜ್ವಲ್ ಗೋರ್ ಅವರು ಪೋಸ್ಟರ್, ಸಾಗರ್ ಗಣೇಶ್ ಸಂಪಾದನೆ ಮಾಡಿದ್ದಾರೆ. ಪ್ರಣವ್ ಭಾವೆ ಛಾಯಾಗ್ರಹಣ, ವೈಮಾನಿಕ ಛಾಯಾಗ್ರಹಣ ಪೃಥ್ವಿ ಜೈನ್ ಮಾಡಿದ್ದು ಪಿಟೀಲು ವಾದಕ ಎ ಆರ್ ಕೃಷ್ಣಮೂರ್ತಿ ಸಂಗೀತಕ್ಕೆ ಜೀವ ತುಂಬಿದ್ದಾರೆ.