ಮಂಗಳೂರು, ಮಾ. 14 (Daijiworld News/MB): ತುಳು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ, ಇತ್ತೀಚೆಗೆ 200 ದಿನ ಪೂರೈಸಿ ತುಳು ಸಿನಿಮಾ ರಂಗದಲ್ಲಿ ದಾಖಲೆ ಬರೆದಿರುವ ಗಿರಿಗಿಟ್ ಸಿನಿಮಾ ತಂಡ 'ಸರ್ಕಸ್' ಸಿನಿಮಾ ಮಾಡಲು ಮುಂದಾಗಿದ್ದು ಇದರ ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭವಾಗಲಿದೆ.
ಈ ಸಿನಿಮಾದಲ್ಲಿ ಗಿರಿಗಿಟ್ ತಂಡದಲ್ಲಿದ್ದ ಹೆಚ್ಚಿನ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಇರಲಿದ್ದಾರೆ ಎಂದು ಈ ಸಿನಿಮಾದ ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.
ತುಳು ಸಿನಿಮಾ ರಂಗದಲ್ಲೇ ಹೊಸ ದಾಖಲೆ ಬರೆದಿರುವ ಗಿರಿಗಿಟ್ ಸಿನಿಮಾ ತಂಡ ಸರ್ಕಸ್ ಸಿನಿಮಾ ಮಾಡಲಿರುವ ಹಿನ್ನಲೆಯಲ್ಲಿ ಈ ಸಿನಿಮಾದ ಮೇಲೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಈ ಮೊದಲು ತಂಡ 'ಗಿರಿಗಿಟ್ -2' ಸಿನಿಮಾ ಮಾಡಲು ಮುಂದಾಗಿದ್ದು ಬಳಿಕ ಆ ಯೋಜನೆ ಕೈಬಿಟ್ಟು ಸರ್ಕಸ್ ಸಿನಿಮಾ ಮಾಡಲು ತೀರ್ಮಾನ ಮಾಡಿದೆ.
ದೇಶ ವಿದೇಶಗಳಲ್ಲಿಯೂ ತನ್ನ ಚಾಪು ಮೂಡಿಸಿರುವ ಗಿರಿಗಿಟ್ ಸಿನಿಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದ ಹಿರಿಯ ನಟರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಗಿರಿಗಿಟ್ ಸಿನಿಮಾದಲ್ಲಿ ನಟಿಸಿದ ಹಲವು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ.