ಹೈದರಾಬಾದ್, ಮಾ.13 (DaijiworldNews/PY) : ಒಂದಲ್ಲ ಒಂದು ವಿವಾದಾತ್ಮಕ ಕಮೆಂಟ್, ಪೋಸ್ಟ್ಗಳನ್ನು ಮಾಡುತ್ತಿದ್ದ ಬಹುಭಾಷ ನಟ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಏಕಾಏಕಿ ಮಾಯವಾಗಿದೆ. ಸ್ವತಃ ಸಿದ್ದಾರ್ಥ್ ಅವರು ತಮ್ಮ ಖಾತೆಯನ್ನು ಡಿಲೀಟ್ ಮಾಡಿಲ್ಲ. ಬದಲಾಗಿ ಅವರ ಖಾತೆಯನ್ನು ಟ್ವಿಟ್ಟರ್ ಸಂಸ್ಥೆಯೇ ಅಮಾನತು ಮಾಡಿದೆ.
ಸಿದ್ದಾರ್ಥ್ ಅವರು ಸಾಮಾಜಿ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ರಾಜಕೀಯ, ಪ್ರಸ್ತುತ ಸನ್ನಿವೇಶ, ಧಾರ್ಮಿಕ ವಿಚಾರಗಳ ಬಗ್ಗೆ ಆಗಾಗ ಟ್ವೀಟ್ ಮಾಡುತ್ತಿದ್ದರು. ಅವರ ಟ್ವೀಟ್ಗಳು ಕೆಲವೊಮ್ಮೆ ವಿವಾದಕ್ಕೂ ಕಾರಣವಾಗುತ್ತಿತ್ತು. ಆದರೆ ಇದೀಗ ದಿಢೀರ್ ಆಗಿ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಕಾಣೆಯಾಗಿದೆ. ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ @actor_siddharth ಎಂದಿತ್ತು. ಆದರೆ ಅದೀಗ ನಾಪತ್ತೆಯಾಗಿದೆ. ಸಿದ್ದಾರ್ಥ್ ಅವರು ಆಗಾಗ ಟ್ವೀಟ್ಗಳ ಮೂಲಕ ಮಾಡುತ್ತಿದ್ದ ಟೀಕೆಗಳಿಂದಾಗಿ ಟ್ವಿಟ್ಟರ್ನಿಂದ ಅವರ ಖಾತೆಯನ್ನು ಡಿಲೀಟ್ ಮಾಡಿದೆ ಎನ್ನಲಾಗಿದೆ.
ಸಿದ್ದಾರ್ಥ್ ಅವರು ಮಾಡುತ್ತಿದ್ದ ಬಹುತೇಕ ಟ್ವೀಟ್ಗಳು ಕೇಂದ್ರ ಸರ್ಕಾರದ ವಿರುದ್ದವಾಗಿರುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಹೇಳಿಕೆಗಳನ್ನು ವಿಮರ್ಶಿಸಿ ಆಗಾಗ ಸಿದ್ದಾರ್ಥ್ ಅವರು ಟ್ವೀಟ್ ಮಾಡುತ್ತಿದ್ದರು. ಅಲ್ಲದೇ ಆರ್ಎಸ್ಎಸ್ ವಿರೋಧಿಸಿ, ಜಾತ್ಯಾತೀತತೆ, ಬಿಜೆಪಿ ಹಾಗೂ ಧಾರ್ಮಿಕ ನಿರಪೇಕ್ಷತೆಯ ಬಗ್ಗೆ ಟ್ವೀಟ್ ಮಾಡುತ್ತಿದ್ದರು. ಸಿದ್ದಾರ್ಥ್ ಅವರು ಹೀಗೆ ಮಾಡುತ್ತಿದ್ದ ಟ್ವೀಟ್ಗಳು ವಿವಾದ ಸೃಷ್ಠಿಸುತ್ತಿದ್ದವು.
ಸಿದ್ದಾರ್ಥ್ ಅವರು ಇತ್ತೀಚೆಗೆ ಕೇಂದ್ರ ಸರ್ಕಾರದ ಸಿಎಎ, ಎನ್ಆರ್ಸಿ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿ ಟ್ವೀಟ್ ಮಾಡಿತ್ತಿದ್ದರು. ಸಿಎಎ ವಿರೋಧಿಸಿ ಪ್ರತಿಭಟನೆಯಲ್ಲಿ ರಸ್ತೆಗಿಳಿದು ಕೂಡಾ ಪಾಲ್ಗೊಂಡಿದ್ದರು. ಈ ವಿಚಾರವಾಗಿ ಸಿದ್ದಾರ್ಥ್ ಅವರ ವಿರುದ್ದ ದೂರು ಕೂಡಾ ದಾಖಲಾಗಿತ್ತು.
ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಅಮಾನತುಗೊಳಿಸುವ ಬಗ್ಗೆ ಕಂಪೆನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಸಿದ್ದಾರ್ಥ್ ಟ್ವಿಟ್ಟರ್ ಖಾತೆಯನ್ನು ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟ್ವೀಟ್ ಮಾಡುತ್ತಿದ್ದ ಹಿನ್ನೆಲೆ ಅಮಾನತ್ತು ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.