ಬೆಂಗಳೂರು, ಮಾ. 08 (Daijiworld News/MB) : ತನ್ನ ಮಾತಿನಿಂದಲ್ಲೇ ಜನರಿಗೆ ಮನರಂಜನೆ ನೀಡುವ ಅನುಶ್ರೀ ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶೋನಲ್ಲಿ ಭಾಗವಹಿಸಿದ ಅವರು ಕಾರ್ಯಕ್ರಮದ ನಿರೂಪಕಿ ಸುಷ್ಮಾ, ಅತಿಥಿಯಾಗಿ ಆಗಮಿಸಿದ್ದ ಅನುಶ್ರೀ ಅವರಿಗೆ 250 ರೂ. ಹಣವಿರುವ ಲಕೋಟೆ ನೀಡುತ್ತಾರೆ. ಆ ಹಣ ನೋಡಿದ ಕೂಡಲೇ ಅನುಶ್ರೀ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕಾರ್ಯಕ್ರಮದ ನಿರೂಪಕಿ ಸುಷ್ಮಾ 250 ರೂ. ಹಣದ ಲಕೋಟೆ ನೀಡುತ್ತಿದ್ದಂತೆ ತಮ್ಮ ಮೊದಲ ಸಂಬಳ ಇದಾಗಿತ್ತು ಎಂದು ಹೇಳಿ ಭಾವುಕರಾಗಿದ್ದಾರೆ.
ಮಂಗಳೂರಿನ ಸ್ಥಳೀಯ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗ ತಿಂಗಳಿಗೆ 800 ರೂ. ಸಂಬಳ ಸಿಗುತ್ತಿತ್ತು. ಬೆಂಗಳೂರಿನಲ್ಲಿ ಕಾರ್ಯಕ್ರಮ ನೀಡಿದರೆ ಹೆಚ್ಚು ಹಣ ದೊರೆಯುತ್ತೆ ಎಂದು ನಾನು ಬೆಂಗಳೂರಿಗೆ ಬಂದೆ. ಮೊದಲಿಗೆ ಬಂದ ಕೂಡಲೇ ಕಾರ್ಯಕ್ರಮದ ಆಯೋಜಕರು ಪ್ರತಿ ಸಂಚಿಕೆಗೆ 250 ರೂ. ಎಂದು ನಿಗದಿ ಮಾಡಿದರು. ನಾನು ಪ್ರತಿ ದಿನ ಸಂಚಿಕೆ ಸಿಗಬಹುದು ಎಂದು ತಿಳಿದಿದ್ದೆ. ಆದರೆ ನನ್ನ ರೀತಿಯಲ್ಲಿ ಎಂಟು ಜನ ನಿರೂಪಕಿಯರಿದ್ದರು. ತಿಂಗಳಿಗೆ ನಾಲ್ಕು ಸಂಚಿಕೆ ಸಿಗುತ್ತಿತ್ತು. ಮೊದಲ ಸಂಚಿಕೆ ಮಾಡಿದಾಗ ನನಗೆ ಸಿಕ್ಕ ಸಂಭಾವನೆ ಇದೇ 250 ರೂಪಾಯಿ" ಎಂದು ಹೇಳಿದರು.
ಈಗ ನಾನು ಎಷ್ಟೇ ಕಾರ್ಯಕ್ರಮ ಮಾಡಬಹುದು, ಹಣವನ್ನು ಚೆಕ್ ಮೂಲಕ ಪಡೆಯಬಹುದು. ಆದರೆ 250 ರೂ. ಸಿಕ್ಕಾಗ ಆಗುತ್ತಿದ್ದ ಖುಷಿ ಇಂದು ಸಿಗಲ್ಲ. ಅಂದಿನ 250 ರೂ. ಕೊಡುತ್ತಿದ್ದ ನೆಮ್ಮದಿ, ಇಂದಿನ ಬದುಕು ಕೊಡಲ್ಲ. ಇಂದು ಗೆಲ್ಲುವ ಹಣಕ್ಕಿಂತ 250 ರೂ. ಮೌಲ್ಯ ನನಗೆ ಹೆಚ್ಚು" ಎಂದು ಹಣಕ್ಕೆ ನಮಸ್ಕಾರ ಮಾಡಿದರು.