ಮಂಗಳೂರು, ಮಾ. 06 (Daijiworld News/MB) : ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ಅವರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ "ವರ್ಣಪಟಲ" ಲಂಡನ್ನಲ್ಲಿ ನಡೆಯಲಿರುವ ಯುಕೆ ಏಷ್ಯನ್ ಚಲನಚಿತ್ರೋತ್ಸವಕ್ಕೆ (ಯುಕೆಎಎಫ್ಎಫ್) ಆಯ್ಕೆಯಾಗಿದೆ.
ತಮ್ಮ ಸಿನಿಮಾ ಯುಕೆ ಏಷ್ಯನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ನಿರ್ದೇಶಕ ಚೇತನ್ ಮುಂಡಾಡಿ ಅವರು, "ಯುಕೆ ಏಷ್ಯನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿಯ ವಿಚಾರ. ಈ ಚಲನಚಿತ್ರದ ನಿರ್ಮಾಪಕರಿಗೆ , ನಟಿಸಿದ ಕಲಾವಿದರಿಗೂ ,ನನ್ನ ಕೋಪದ ಜೊತೆಗೆ ದುಡಿದ ಎಲ್ಲಾ ತಂತ್ರಜ್ಞರಿಗೆ ಶುಭಾಶಯಗಳನ್ನು ತಿಳಿಸಲು ಇಷ್ಟಪಡುತ್ತೇನೆ. ಜೊತೆಗೆ ಪರೋಕ್ಷವಾಗಿ ನನ್ನ ಬೆಳವಣಿಗೆಯಲ್ಲಿ ಇರುವ ಎಲ್ಲಾ ಗೆಳೆಯರಿಗೂ ಶುಭಾಷಯ" ಎಂದು ಹೇಳಿದ್ದಾರೆ.
"ಸಾಯಿಗಣೇಶ್ ಪ್ರೊಡಕ್ಷನ್"ನ ನಿರ್ಮಾಪಕರಾದ " ಕವಿತ ಸಂತೋಷ್ ಮತ್ತು ಡಾ||ಸರಸ್ವತಿ ಹೊಸದುರ್ಗ" ರವರ ಚೊಚ್ಚಲ ಕನಸಿನ ನಿರ್ಮಾಣದ ಈ ಸಿನಿಮಾವು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ತಾಯಿ ಮಗುವಿನ ಬಾಂಧವ್ಯ ಮತ್ತು ಮಕ್ಕಳನ್ನು ಕಾಡುವ ಆಟಿಸಂ ಖಾಯಿಲೆ ಕುರಿತ ಕಥಾವಸ್ತುವನ್ನು ಹೊಂದಿದೆ.
ಈ ಸಿನಿಮಾದಲ್ಲಿ ಖ್ಯಾತ ನಟಿ ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ನಾಯಕ ನಟನಾಗಿ ಅನೂಪ್ ಸಾಗರ್, ನಾಯಕಿಯಾಗಿ ಜೋಗುಳ ಧಾರವಾಹಿಯ ಜ್ಯೋತಿ ರೈ, ಆಟಿಸಂ ಪೀಡಿತ ಮಗುವಾಗಿ ಸಿನಿಮಾ ರಂಗಕ್ಕೆ ಹೊಸ ಪರಿಚಯ ಧನಿಕ ಹೆಗ್ಡೆ, ಚೇತನ್ ರೈ ಮಾಣಿ, ಇಳಾ ವಿಟ್ಲಾ , ರಂಗಿತರಂಗ ಸಿನಿಮಾದ ಕಲಾವಿದ ಅರವಿಂದ್ ರಾವ್ ಮತ್ತು ಕಿರುತೆರೆ ಕಲಾವಿದ ಶ್ರೀಕಾಂತ್ ಹೆಬ್ಲಿಕರ್ ಹಲವು ಕಿರುತೆರೆ ಕಲಾವಿದರು ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾಕ್ಕೆ ಎ.ಪಿ ಅರ್ಜುನ್ ಸಾಹಿತ್ಯವಿದ್ದು, ವಿನೂ ಬಳಂಜ ಸಂಭಾಷಣೆ ಬರೆದಿದ್ದಾರೆ. ಹೊಸ ಪ್ರತಿಭೆ ಹರ್ಷವರ್ಧನ ಅವರು ಸಂಗೀತ ನಿರ್ದೇಶನ ಮಾಡಿದ್ದು ಛಾಯಾಗ್ರಹಕವನ್ನು ಗಣೇಶ್ ಹೆಗ್ಡೆ ನಿರ್ವಹಿಸಿದ್ದಾರೆ.