ಮುಂಬಯಿ, ಮಾ. 05 (Daijiworld News/MB) : ಕಡಂದಲೆ ಸುರೇಶ್ ಎಸ್.ಭಂಡಾರಿ ನಿರ್ಮಾಪಕತ್ವದ ನಾಗೇಶ್ವರ ಸಿನಿ ಕ್ರಿಯೇಷನ್ಸ್ ಲಾಂಛನ (ಬ್ಯಾನರ್)ನಲ್ಲಿ ರಚಿತ ಹಾಸ್ಯ ರಸಪ್ರಧಾನ ‘ಅಂಬರ್ ಕ್ಯಾಟರರ್ಸ್’ ತುಳು ಸಿನೆಮಾ ಮೂಲಕ ಕರಾವಳಿ ಜನತೆಯಲ್ಲಿ ಮನೆಮಾತಾಗಿರುವ ತೌಳವ ಸೂಪರ್ಸ್ಟಾರ್ ಸೌರಭ್ ಭಂಡಾರಿ ಇದೀಗ ತುಳುವಿನಿಂದ ತಮಿಳು ಚಲನಚಿತ್ರದತ್ತ ಹೆಜ್ಜೆ ಮೂಡಿಸಿದ್ದಾರೆ. ಎತಿರ್ ನೀಚಲ್, ಕಾಕಿ ಸತ್ತ, ಕೋಡಿ ಸಿನೆಮಾ ಮೂಲಕ ವಿಶ್ವಖ್ಯಾತಿ ಪಡೆದ ಸುಮಾರು 39 ರ ಹರೆಯದ ಯುವ ಬರಹಗಾರ, ಗೀತರಚನೆಕಾರ, ವಿಜಯ್ ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ ಮಾನ್ಯತಾ ತಮಿಳು ಭಾಷೆಯಲ್ಲಿನ ಶಿಖರಾಗ್ರ ಚಲನಚಿತ್ರ ನಿರ್ದೇಶಕ ಆರ್.ಎಸ್ ದೊರೈ ಸೆಂಥಿಲ್ ಕುಮಾರ್ ಇವರಿಂದಲೇ ಪ್ರಶಂಸೆಗೆ ಪಾತ್ರರಾದ ಸೌರಭ್ ತಮಿಳು ಸಿನೆಮಾದತ್ತ ಕ್ರಮಿಸಿದ ಮೊದಲ ತುಳುವ (ಮುಂಬಯಿವಾಸಿ) ಚಿತ್ರನಟರೆಣಿಸಿದ್ದಾರೆ.
ತಮಿಳು ಚಿತ್ರಲೋಕದ ಹೆಸರಾಂತ ನಿರ್ಮಾಪಕ ಕಲೈಪುಲಿ ಎಸ್.ಥನು ಅವರೇ ಖುದ್ಧಾಗಿ ಸೌರಭ್ ಭಂಡಾರಿ ಅವರ ನಟನೆಯನ್ನು ಕಂಡು ಆಶಿರ್ವದಿಸಿ ತಮಿಳು ಭಾಷಾ ಚಿತ್ರದಲ್ಲಿ ನಟಿಸುವಂತೆ ಪ್ರೇರಪಿಸಿ ಪಟ್ಟಾಸ್ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಧನುಷ್ ಜೊತೆ ಮಾರ್ಶಲ್ ಆರ್ಟ್ನಲ್ಲಿ ಸೌರಭ್ ಅಭಿನಯಿಸಿದ್ದಾರೆ.
೨೦೧೬ರಲ್ಲಿ ಸೆಂಥಿಲ್ ಕುಮಾರ್ ತನ್ನ ಸಿನೆಮಾದಲ್ಲಿ ಧನುಷ್, ತ್ರಿಶಾ ಮತ್ತು ಅನುಪಮಾ ಪರಮೇಶ್ವರನ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಕೋಡಿ ಚಿತ್ರದಲ್ಲಿ ರಜನಿಕಾಂತ್ ಅವರ ಅಳಿಯ ಧನುಷ್ ಅವರ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ದ್ವಿಪಾತ್ರಗಳನ್ನು ನಿಭಾಯಿಸಿದ್ದು, ಈ ಚಿತ್ರವು ವಿಮರ್ಶಕರಿಂದ ಧನಾತ್ಮಕವಾಗಿ ಪ್ರಶಂಸೆಗೊಳಪಟ್ಟಿತ್ತು. ಇದೀಗ ಧನುಷ್ ಅವರ ಪ್ರಧಾನ ಭೂಮಿಕೆ ಮತ್ತು ಮತ್ತೆ ದ್ವಂದ್ವ ಪಾತ್ರಗಳಲ್ಲಿ ಪಟ್ಟಾಸ್ ಚಿತ್ರ ಚಿತ್ರೀಕರಣ ಗೊಂಡಿದೆ. ಸ್ನೇಹ ಮತ್ತು ಮೆಹ್ರೀನ್ ಅವರೊಂದಿಗೆ ಸೌರಭ್ ಭಂಡಾರಿ ಕೂಡಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲ್ಯದಿಂದಲೇ ಕರಾಟೆ ಮಾರ್ಶಲ್ ಆರ್ಟ್ನಲ್ಲಿ ಪಳಗಿದ ಸೌರಭ್, ಸ್ವರ್ಣ ಪದಕದೊಂದಿಗೆ ‘ಬ್ಲಾ ಕ್ ಬೆಲ್ಟ್’ ಚ್ಯಾಂಪಿಯನ್ ತನ್ನದಾಗಿಸಿದ ಅಪ್ರತಿಮ ಪ್ರತಿಭೆ. ಸುಮಾರು ಎರಡು ದಶಕಗಳಿಂದ ಕರಾಟೆ ಅಭ್ಯಾಸಿಸಿ ಡ್ಯಾನ್ ಬ್ಲ್ಯಾಕ್ಬೆಲ್ಟ್ ಕರಾಟೆ ಚ್ಯಾಂಪಿಯನ್ಶಿಪ್ ವಿಜೇತರೆಣಿಸಿ ಸಿಂಗಾಪುರ, ಕೆನಡಾ, ಆಸ್ಟ್ರೇಲಿಯಾ, ದುಬಾಯಿ, ಹಾಂಕ್ಕಾಂಗ್, ಮಲೇಷಿಯಾ ಹೀಗೆ ವಿವಿಧ ದೇಶಗಳಲ್ಲಿ ಭಾರತೀಯ ಪ್ರತಿನಿಧಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ ಕರಾಟೆಪಟು. ಇದೀಗಲೇ 17 ಚಿನ್ನದ ಪದಕಗಳು ಸೇರಿದಂತೆ ಇತರ ನೂರಾರು ಪದಕ, ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ವಿತರಕರಾಗಿ ಪ್ರಸಿದ್ಧಿಯ ಕಲೈಪುಲಿ ಎಸ್.ಥನು ತನ್ನ ವಿ ಕ್ರಿಯೇಷನ್ಸ್ ಮತ್ತು ಕಲೈಪುಲಿ ಫಿಲ್ಮ್ಸ್ ಇಂಟರ್ನೇಶನಲ್ ಈ ಎರಡು ಚಿತ್ರ ನಿರ್ಮಾಣ ಕಂಪನಿಗಳ ಮೂಲಕ ತಮಿಳು ಚಿತ್ರರಂಗದಲ್ಲಿ ನಿರ್ಮಿಸಿದ ಚಿತ್ರಗಳಿಗೆ ಅಂತರಾಷ್ಟ್ರೀಯ ಹೆಸರುವಾಸಿ ಆಗಿದ್ದಾರೆ. ಇವರೋರ್ವ ಎ ಕಮರ್ಷಿಯಲ್ ಎಂಟರ್ಟೈನರ್ ಎಂದೇ ಪ್ರಸಿದ್ಧ ಇವರ ಚಲನಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿವೆ. ೨೦೧೬ರ ಹೊತ್ತಿಗೆ ಅವರ ನಿವ್ವಳ ಮೌಲ್ಯ ಅಂದಾಜು 65 ಮಿಲಿಯನ್ ದಾಟಿದ್ದೇ ಇವರ ಮಹತ್ಸಾಧನೆ ಆಗಿದೆ. ಅವರ ಅನೇಕ ಸಿನೆಮಾಗಳಲ್ಲಿ ಮೂರು ಚಲನಚಿತ್ರಗಳು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ತಮಿಳು ಚಿತ್ರಗಳಾಗಿದ್ದು ಆ ಪೈಕಿ ಪಟ್ಟಾಸ್ ಚಿತ್ರದಲ್ಲಿ ಸೌರಭ್ ಭಂಡಾರಿ ಕಲೈಪುಲಿ ಇವರ ನಿರ್ಮಾಪಕತ್ವದ ಸಿನೆಮಾದಲ್ಲಿ ನಟಿಸುತ್ತಿರುವುದು ತುಳು-ಕನ್ನಡಿಗರ ಹಿರಿಮೆಯಾಗಿದೆ.
ಪಟ್ಟಾಸ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದ ನನಗೆ ಸ್ಥೈರ್ಯದೊಂದಿಗೆ ಕಾದಾಡುವ (ಕರಾಟೆ) ಕ್ರಮಾಗತಿಗೆ ಮತ್ತಷ್ಟು ವಿಫುಲ ಅವಕಾಶ ಪಡೆದಂತಾಗಿದೆ. ಕರಾಟೆಯಲ್ಲಿನ ಸುಮಾರು ೨೦ ವರ್ಷಗಳ ಪರಿಶ್ರಮ, ಅಭ್ಯಾಸವೇ ಈ ಚಿತ್ರದಲ್ಲಿ ನಟಿಸಲು ಸುಲಭಸಾಧ್ಯವಾಗಿದೆ. ನನ್ನ ಜೀವನದಲ್ಲೇ ಇದೊಂದು ಸೋಜಿಗದ ವಿಸ್ಮಯಕಾರಿ ಪರಮ ಅನುಭವ ಇದಾಗಿದೆ. ಇನ್ನಷ್ಟು ಖುಷಿ ಅಂದರೆ ಈ ಸಿನೆಮಾವು ಧನುಷ್ ಅವರಷ್ಟೇ ನನಗೂ ಅನಾವರಣ ನನ್ನ ಪಾಲಿಗೂ ಧಕ್ಕಿದೆ. ತುಳುವಿನ ಗಬ್ಬರ್ಸಿಂಗ್ ಸಿನೆಮಾ ಚಿತ್ರೀಕರಣದಲ್ಲಿದ್ದು, ಓರ್ವ ಪೋಲಿಸ್ ಅಧಿಕಾರಿಯಾಗಿ ಪಾತ್ರ ನಿಭಾಯಿಸಿರುವೆ. ಶೀಘ್ರವೇ ಕನ್ನಡದ ಸಿನೆಮಾ ಒಂದರಲ್ಲಿ ಪ್ರಧಾನಭೂಮಿಕೆ ಯಲ್ಲಿ ಅಭಿನಯಿಸಲಿದ್ದೇನೆ. ಇದೀಗಲೇ ಕೋಸ್ಟಲ್ವುಡ್ (ತುಳು ಚಿತ್ರರಂಗ), ಸ್ಯಾಂಡಲ್ವುಡ್ (ಕನ್ನಡ ಚಿತ್ರರಂಗ), ಟಾಲಿವುಡ್ (ತಮಿಳ್ ಚಿತ್ರರಂಗ)ನಲ್ಲಿ ನಟಿಸಿರುವ ಸೌರಭ್ ಭಂಡಾರಿ ಹಿಂದಿ ಚಿತ್ರರಂಗ ಬಾಲಿವುಡ್ನತ್ತ ಹೆಜ್ಜೆಯನ್ನೂರಲು ಆಶಯ ವ್ಯಕ್ತಪಡಿಸಿದ್ದಾರೆ.