ಚೆನ್ನೈ, ಮಾ 2 (Daijiworld News/MSP): ಜನಪ್ರಿಯ ನಟ ಕಮಲ್ ಹಾಸನ್ ಹಾಗೂ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಂಡಿಯನ್ 2' ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಬಿದ್ದು ಸಂಭವಿಸಿದ ಅಪಘಾತದಲ್ಲಿ ಮೂವರು ಸಹಾಯ ನಿರ್ದೇಶಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಕಮಲ್ ಹಾಸನ್ ಇಂದು ಚೆನ್ನೈ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಇಂಡಿಯನ್–2 ಚಿತ್ರಕ್ಕೆ ಚೆನ್ನೈ ಹೊರಹೊಲಯದಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸೆಟ್ ತಯಾರಿಸಲಾಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದ್ದು 10 ಮಂದಿಗೆ ಗಾಯಗಳಾಗಿತ್ತು.
ಅಪಘಾತ ಸಂಭವಿಸಿದಾಗ ಕಮಲ್ ಹಾಸನ್ ಸೆಟ್ ತಯಾರಿಸುವ ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ತಿಳಿದುಬಂದಿತ್ತು.ಕಮಲ್ ಹಾಸನ್ ಸೇರಿದಂತೆ ಚಿತ್ರಕ್ಕೆ ಸಂಬಂಧಪಟ್ಟ ಹಲವರ ಮೇಲೆ ಚೆನ್ನೈ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಚಿತ್ರದ ನಿರ್ದೇಶಕ ಶಂಕರ್ ಅವರನ್ನು ಚೆನ್ನೈ ಪೊಲೀಸರು ಕಳೆದ ವಾರ ವಿಚಾರಣೆ ನಡೆಸಿದ್ದರು.