ಚೆನ್ನೈ, ಫೆ.25 (DaijiworldNews/PY): ತಮಿಳುನಾಡಿನ ದಿ. ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನದಂದು ಜಯಲಲಿತಾ ಅವರ ಬದುಕನ್ನು ಆಧರಿಸಿದ ಬಯೋಪಿಕ್ನಲ್ಲಿ ಜೂನಿಯರ್ ತಲೈವಿಯಾಗಿ ಕಾಣಿಸಿಕೊಂಡಿರುವ ಕಂಗನಾ ರಣಾವತ್ ಅವರ ಮತ್ತೊಂದು ಚಿತ್ರವನ್ನು ಜಯಲಲಿತಾ ಅವರ ಜನ್ಮದಿನದಂದು ಚಿತ್ರತಂಡ ಬಹಿರಂಗಗೊಳಿಸಿದೆ.
ಈ ಬಯೋಪಿಕ್ನಲ್ಲಿ ಕಂಗನಾ ಅವರು ಕಪ್ಪು-ಕೆಂಪು ಅಂಚಿನ ಬಿಳಿಸೀರೆ ಉಟ್ಟು, ತಲೆಗೂದಲನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದಾರೆ. ಹಣೆಯ ಮೇಲೆ ಅಗಲವಾದ ಬಿಂದಿಯನ್ನು ಹಾಕಿ ಅದರ ಅಡಿಯಲ್ಲಿ ಕೆಂಪು ಅಡ್ಡಗೆರೆಯನ್ನು ಹಾಕಿದ್ದು, ಕೆಳತುಟಿಯನ್ನು ಎಡಕ್ಕೆ ಓರೆಯಾಗಿಸಿ ಜಯಲಲಿತಾರಂತೆಯೇ ಮುಗುಳ್ನಗೆ ಬೀರಿದ್ದಾರೆ.
ಕಂಗನಾ ಅವರು ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಯಲಲಿತಾ ಅವರು ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ. ಜೂನ್ 26ರಂದು ತಲೈವಿ ತೆರೆಗೆ ಬರಲಿದೆ.
ಎ.ಎಲ್.ವಿಜಯ್ ನಿರ್ದೇಶನದ ತಲೈವಿ ಚಿತ್ರವು ಚಿತ್ರನಟಿ, ಖ್ಯಾತ ನರ್ತಕಿಯೂ ಆಗಿದ್ದ ಜಯಲಲಿತಾರ ವೈವಿಧ್ಯಮಯ, ಬಹುಮುಖಿ ಬದುಕು ಕಟ್ಟಿಕೊಡುವ ಬಯೋಪಿಕ್ ಆಗಿದ್ದು, ಈ ಚಿತ್ರವು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಕಂಗನಾ ಅವರು ತಲೈವಿಗಾಗಿ ತಮಿಳು ಕಲಿತು, ಭರತನಾಟ್ಯಂ ತರಗತಿಗೂ ಸೇರಿಕೊಂಡಿದ್ದರು. ಜಯಲಲಿತಾರಂತೆ ಕಾಣಿಸಿಕೊಳ್ಳಲೆಂದು ಗಂಟೆಗಟ್ಟಲೆ ಮೇಕಪ್ ಸೆಷನ್ಗಳಲ್ಲಿ ಭಾಗವಹಿಸಿದ್ದರು.
ವಿಜಯೇಂದರ್ ಪ್ರಸಾದ್ ಅವರು ಈ ಹಿಂದೆ ಬಾಹುಬಲಿ ಹಾಗೂ ಮಣಿಕರ್ಣಿಕಾ ಸಿನಿಮಾಗಳಿಗೆ ಕಥೆ ಬರೆದಿದ್ದು, ಈ ಸಿನಿಮಾಕ್ಕೂ ಕಥೆ ಬರೆದಿದ್ದಾರೆ. ತಲೈವಿ ಸಿನಿಮಾವನ್ನು ವಿಷ್ಣುವರ್ಧನ್ ಇಂದೂರಿ ಹಾಗೂ ಶೈಲೇಶ್ ಸಿಂಗ್ ನಿರ್ಮಾಣ ಮಾಡಲಿದ್ದಾರೆ.