ಬೆಂಗಳೂರು, ಫೆ 17 (Daijiworld News/MB) : ಹಿನ್ನಲೆ ಗಾಯಕಿ ಸುಶ್ಮಿತಾ ರಾಜೇ (26) ಪತಿಯ ಕಿರುಖುಳ ತಡೆಯಲಾರದೆ ನಾಗರಬಾವಿಯಲ್ಲಿರುವ ಪತಿಯ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಶ್ಮಿತಾ ಎಂಬಿಎ ಪದವೀಧರೆ ಹಾಗೂ ಸುಗಮ ಸಂಗೀತ ಗಾಯಕಿಯಾಗಿದ್ದು ಅವರು ಸಾವಿಗೆ ಮುನ್ನ ಡೆತ್ ನೋಟ್ ಬರೆದಿದ್ದಾರೆ ಎಂದು ಹೇಳಲಾಗಿದೆ.
ಈ ಪತ್ರದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ ಎಂದು ಎನ್ನಲಾಗಿದೆ. ಹಾಗೆಯೇ ಅವರು ತಾಯಿಗೆ ಹಾಗೂ ತಮ್ಮನಿಗೆ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಗ ವ್ಯಾಟ್ಸ್ಆಪ್ ಮೂಳಕ ಸುಶ್ಮಿತಾ ಅವರು ಡೆತ್ನೋಟ್ ಎಂದು ಹೇಳಲಾದ ಪತ್ರ ಹಡಿದಾಡುತ್ತಿದ್ದು ಅದರಲ್ಲಿ, "ಅಮ್ಮ ನನ್ನನ್ನು ಕ್ಷಮಿಸು ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಅವರು ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಪದೇ ಪದೇ ಮನೆ ಬಿಟ್ಟು ತೊಲಗು ಎಂದು ಹೇಳುತ್ತಿದ್ದಾರೆ. ನನಗೆ ಮಾನಸಿಕವಾಗಿ ತುಂಬ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣರಾಗಿದ್ದಾರೆ. ಎಷ್ಟೇ ಬೇಡಿಕೊಂಡು, ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ವಿವಾಹವಾದಾಗಿನಿಂದ ಇದೇ ರೀತಿ ಹಿಂಸೆ ಮಾಡುತ್ತಿದ್ದರು. ಆದರೆ ನಾನು ಯಾರ ಬಳಿಯೂ ಹೇಳಿರಲಿಲ್ಲ. ನನ್ನನ್ನು ನನ್ನ ಅಮ್ಮನ ಊರಿನಲ್ಲಿಯೇ ಮಣ್ಣು ಮಾಡು ಅಥವಾ ಸುಡು. ನನ್ನ ಎಲ್ಲಾ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೇ ಬಿಡಬೇಡ. ಇಲ್ಲವಾದಲ್ಲಿ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮ ಮಿಸ್ ಯು... ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನು ಚೆನ್ನಾಗಿ ನೋಡೊಕೊ. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ. ಇದನ್ನು ಅಮ್ಮನಿಗೆ ತೋರಿಸಲು ಮರೆಯಬೇಡ ಎಂದು ಬರೆಯಲಾಗಿದೆ.
ಸುಶ್ಮಿತಾ ಹಾಲು ತುಪ್ಪ, ಶ್ರೀ ಸಾಮಾನ್ಯ ಸೇರಿದಂತೆ ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ. ಈ ಕುರಿತಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.