ಮಂಗಳೂರು, ಫೆ 15 (Daijiworld News/MB) : ವಿಶ್ವನಾಥ್ ಕೋಡಿಕಲ್ ಅವರ ಚೊಚ್ಚಲ ನಿರ್ದೇಶನದ ತುಳು ಚಿತ್ರ ಬಿಡುಗಡೆಗೊಂಡು ಕೋಸ್ಟಲ್ವುಡ್ನಲ್ಲಿ ವಿಶೇಷ ಸದ್ದು ಮಾಡುತ್ತಿದೆ. ಯುವ ಪ್ರೇಮಿಗಳ ನಡುವಿನ ವಿಶೇಷ ಕಥಾ ಹಂದರವನ್ನೊಳಗೊಂಡ "ಎನ್ನ" ಈಗಾಗಲೇ ಯುವಕರನ್ನು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿಯನಿಯರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಪ್ರೇಮಿಗಳ ದಿನಾಚರಣೆಯಂದೇ "ಎನ್ನ" ಸಿನಿಮಾ ಬಿಡುಗಡೆಗೊಂಡಿದ್ದು ದ.ಕ ಹಾಗೂ ಉಡುಪಿ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಗ್ಲೋರಿಯಸ್ ಅಂಜೆಲೋರ್ ಬ್ಯಾನರಿನಡಿ ಮ್ಯಾಕ್ಸಿಮ್ ಪಿರೇರಾ, ಅಂಜೆಲೋರ್ ಹಾಗೂ ಕೆನ್ಯುಟ್ ಮಥಾಯಸ್ ಪಿಲಾರ್ ನಿರ್ಮಾಪಕತ್ವದ "ಎನ್ನ" ತುಳು ಚಿತ್ರರಂಗದ ಸಾಂಪ್ರದಾಯಿಕ ಶೈಲಿಯಿಂದ ಹೊರಗೆ ಬಂದು ಹೊಸ ಅಯಾಮದೊಂದಿಗೆ ಮೂಡಿಬರುವಲ್ಲಿ ಸಫಲವಾಗಿದೆ.
"ಎನ್ನ" ವಿಶ್ವನಾಥ್ ಕೋಡಿಕಲ್ ಅವರ ಕನಸಿನ ಕೂಸು. ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನದ ಜವಾಬ್ದಾರಿ ಹೊತ್ತ ವಿಶ್ವನಾಥ್ ಅವರು ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಾತ್ರಗಳ ಜೋಡಣೆ ಹಾಗೂ ಕಲಾವಿದರ ಸಮರ್ಪಕ ಉಪಯೋಗದ ಮೂಲಕ ವಿಶ್ವನಾಥ್ ಓರ್ವ ಸಮರ್ಥ ನಿರ್ದೇಶಕ ಎಂದು ಸಾಬೀತುಪಡಿಸಿದ್ದಾರೆ. "ಎನ್ನ" ಸಿನಿಮಾದಲ್ಲಿ ಬರುವ ಹಾಸ್ಯ ಸನ್ನಿವೇಶಗಳು ಸಿನಿಮಾದ ಮೂಲ ಕಥೆಗೆ ತೀರಾ ಹತ್ತಿರವಾಗಿದ್ದು ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯನ್ನು ಕಂಡಿವೆ. ಸಿ.ಕೆ ಪ್ರಶಾಂತ್ ಅವರು ಚಿತ್ರದ ಹಾಸ್ಯ ಸನ್ನಿವೇಷಗಳಿಗೆ ಸಂಭಾಶಣೆ ಬರೆದ್ದಿದ್ದು ಹಾಗೂ ಸ್ವತ: ಪ್ರಮುಖ ಹಾಸ್ಯ ಪಾತ್ರಧಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಥಾನಾಯಕರಾಗಿ ವಿ ಜೆ ವಿನೀತ್ ಹಾಗೂ ನಾಯಕಿಯಾಗಿ ಶ್ರುತಿ ಪೂಜಾರಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸುವಲ್ಲಿ ಸಫಲರಾಗಿದ್ದಾರೆ. ಹಾವ ಭಾವಗಳಲ್ಲಿ ವಿಶೇಷ ಹಿಡಿತ ಹೊಂದಿರುವ ವಿನೀತ್ ತುಳುಚಿತ್ರರಂಗದಲ್ಲಿ ನಾಯಕ ನಟನಾಗಿ ಹೊಸ ಭರವಸೆ ಮೂಡಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ಲೋಯ್ ವಾಲೆಂಟೈನ್ ಅವರು ಸಿನಿಮಾದ ಸನ್ನಿವೇಶಗಳಿಗೆ, ಪ್ರತ್ಯೇಕವಾಗಿ ಪ್ರೀತಿ-ಪ್ರೇಮದ ದೃಶ್ಯಗಳಿಗೆ ತಮ್ಮ ಸಂಗೀತದ ಮೂಲಕ ವಿಶೇಷ ಮಾದಕತೆಯನ್ನು ಕೊಟ್ಟಿದ್ದಾರೆ. ಕೋಸ್ಟಲ್ ವುಡ್ನ ಮೊದಲ ಮಹಿಳಾ ಛಾಯಾಗ್ರಾಹಕಿ ಎಂಬ ಹೆಗ್ಗಳಿಕೆಯೊಂದಿಗೆ "ಎನ್ನ" ಸಿನಿಮಾಕ್ಕೆ ಕ್ಯಾಮೆರಾ ನಿರ್ವಹಣೆ ಮಾಡಿದ ವೈಶಾಲಿ ಎಸ್ ಸಿನಿಮಾದುದ್ದಕ್ಕೂ ವೃತ್ತಿಪರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಿರ್ದೇಶಕರ ಕನಸಿನ ದೃಶ್ಯಗಳನ್ನು ಚಾಚೂ ತಪ್ಪದೆ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ವೈಶಾಲಿ "ಎನ್ನ" ಸಿನಿಮಾದ ಮೂಲಕ ಹೊಸ ಇತಿಹಾಸವೊಂದನ್ನು ರಚಿಸಿದ್ದಾರೆ.
ಕಥೆ, ಸಂಭಾಷಣೆ, ನಿರ್ದೇಶನ, ಸಂಕಲನ ಹಾಗೂ ಸಂಕಲನ ಎಂಬಂತೆ ಎಲ್ಲಾ ವಿಭಾಗಳಲ್ಲೂ ಸೈ ಎನಿಸಿದ "ಎನ್ನ" ನೋಡಿ ಚಿತ್ರಾಮಂದಿರದ ಹೊರ ಬಂದ ಪ್ರೇಕ್ಷಕ "ಎನ್ನ" - ಎನ್ನ ಮಾತ್ರ್ ಅತ್ತ್ "ನಮ್ಮ" ಸಿನೆಮಾ ಎಂದು ಉಧ್ಘರಿಸಿದ್ದಾನೆ. ಉತ್ತಮ ಕಥಾವಸ್ತುವನ್ನೊಳಗೊಂಡ ಚಿತ್ರಗಳನ್ನು ಪ್ರೇಕ್ಷಕ ಎಂದೂ ಕೈಬಿಡುವುದಿಲ್ಲ ಎಂಬುದಕ್ಕೆ "ಎನ್ನ" ಉತ್ತಮ ಉದಾಹರಣೆ.