ಮುಂಬೈ, ಫೆ 12 (Daijiworld News/MB) : ಬಾಲಿವುಡ್ನ ಹಿರಿಯ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರು ಪೋರ್ನ್ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದರು ಎಂದು ಇತ್ತೀಚೆಗೆ ಮಹಿಳೆಯೊಬ್ಬಳು ದೂರು ನೀಡಿದ್ದು ಇದೀಗ ಮತ್ತೋರ್ವ ಮಹಿಳೆ 30 ವರ್ಷಗಳ ಹಿಂದೆ ಗಣೇಶ್ ಅವರು ಲೈಂಗೀಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
1990ರಲ್ಲಿ ನಾನು ನೃತ್ಯಗಾತಿಯಾಗಿದ್ದ ಸಂದರ್ಭದಲ್ಲಿ ಗಣೇಶ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಈಗ ನನಗೆ ಮದುವೆಯಾಗಿ ಮಕ್ಕಳಿವೆ. ಆದರೆ ಗಣೇಶ್ ಈಗಲೂ ಬದಲಾಗಿಲ್ಲ ಎಂದು ನನಗೆ ತಿಳಿಯಿತು. ಅವರು ಬೇರೆ ಹೆಣ್ಣು ಮಕ್ಕಳಿಗೆ ನಡೆಸಿದ ಲೈಂಗಿಕ ದೌರ್ಜನ್ಯ ನನಗೆ ತಿಳಿದು ಬಂದಿದೆ. ಹಾಗಾಗಿ ನಾನು ನನ್ನ ಮೇಲಾಗಿದ್ದ ದೌರ್ಜನ್ಯದ ಕುರಿತು ಮಾತನಾಡಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ 30 ವರ್ಷದ ಮಹಿಳೆಯೊಬ್ಬರು, "ನಾನು ಆಚಾರ್ಯ ಅವರ ಕಚೇರಿಗೆ ಹೋದಾಗಲೆಲ್ಲಾ ಪೋರ್ನ್ ವಿಡಿಯೋಗಳನ್ನು ನೋಡಲು ಒತ್ತಾಯಿಸುತ್ತಿದ್ದರು. ಅಷ್ಟು ಮಾತ್ರವಲ್ಲದೇ ನನಗೆ ಬರುವ ಆದಾಯದಲ್ಲಿ ಕಮಿಷನ್ ಕೊಡಬೇಕು ಬೇಡಿಕೆ ಮಾಡಿದ್ದರು" ಎಂದು ದೂರು ನೀಡಿದ್ದರು.
ಅದಕ್ಕಿಂತಲೂ ಮೊದಲು ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಗಣೇಶ್ ಆಚಾರ್ಯ ಅವರು ನೃತ್ಯಗಾರರನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಆರೋಪ ಮಾಡಿದ್ದರು.
ಗಣೇಶ್ ಆಚಾರ್ಯ ಅವರು ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹಿಂದಿ 'ಗಲಿ ಗಲಿ ಮೇ' ಹಾಡು, ಅಲ್ಲದೇ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಇಂಟ್ರೋ ಹಾಡಿಗೆ ಗಣೇಶ್ ನೃತ್ಯ ಸಂಯೋಜನ ಮಾಡಿದ್ದಾರೆ.