ಬೆಂಗಳೂರು, ಫೆ.10 (DaijiworldNews/PY): ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಚಿತಾರ್ಥ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥವು ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದಿದ್ದು, ಭಾವಿ ಪತ್ನಿ ರೇವತಿ ಅವರಿಗೆ ವಜ್ರದುಂಗರ ತೊಡಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥಕ್ಕೂ ಮೊದಲು ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ತಂದೆ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ನಿಶ್ಚಿತಾರ್ಥದಲ್ಲಿ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಅವರ ಸಹೋದರಿಯರಾದ ಶೈಲಜಾ ಮತ್ತು ಅನಸೂಯ ಹಾಗೂ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಭಾವಿ ವಧು-ವರರು ಪರಸ್ಪರ ಹಾರ-ಉಂಗುರ ಬದಲಾಯಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭಕೋರಿದ್ದಾರೆ.
ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್ನಲ್ಲಿದ್ದು, ಕಾರ್ಪೆಟ್ನಿಂದ ಹಿಡಿದು ಮಂಟಪದವರೆಗೂ ಕೂಡ ಶ್ವೇತ ವರ್ಣದಿಂದ ಕಂಗೊಳಿಸುತ್ತಿತ್ತು. ನಿಶ್ಚಿತಾರ್ಥದ ಮಂಟಪ ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂವನ್ನು ತರಿಸಲಾಗಿತ್ತು. ದೆಹಲಿಯಿಂದ ಕ್ರಿಸ್ಟಲ್ಸ್ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿತ್ತು.
ಒಟ್ಟು 6 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಬಂಧುಗಳು, ಗಣ್ಯರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಬಾಳೆ ಎಲೆ ಊಟದ ಆಯೋಜನೆ ಮಾಡಲಾಗಿತ್ತು. ಕುಮಾರಸ್ವಾಮಿಯವರು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಬಂದಂತವರು ಬಾಳೆ ಎಲೆಯಲ್ಲಿ ಊಟ ಮಾಡಬೇಕು ಎಂದು ಆಸೆಪಟ್ಟಿದ್ದರು. ಇದೇ ಕಾರಣಕ್ಕೆ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಲಾಗಿದ್ದು, ಇದರೊಂದಿಗೆ ಗಣ್ಯರಿಗೆ ಅನುಕೂಲವಾಗಲಿ ಎಂದು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ನಿಶ್ಚಿತಾರ್ಥಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ತಮ್ಮ ಜೀವನದ ಮೊದಲನೇ ಅಧ್ಯಾಯ ಪ್ರಾರಂಭಿಸುತ್ತಿದ್ದು ಕೃಷ್ಣಪ್ಪ ಹಾಗೂ ತಮ್ಮ ಈ ಎರಡು ಕುಟುಂಬಗಳು ಸೇರಿ ನನ್ನ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಮೊದಲನೇ ಹೆಜ್ಜೆ ಇಡುತ್ತಿದ್ದೇವೆ. ಹಾಗಾಗಿ ರಾಜ್ಯದ ಜನತೆಯ ಆಶೀರ್ವಾದ ಅಗತ್ಯ ಎಂದರು.