ಮಂಗಳೂರು, ಫೆ 09 (Daijiworld News/MB) : ಅಂತರ್ ರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ನಟಿಸಿರುವ 'ಅಗೋಳಿ ಮಂಜಣ್ಣ' ತುಳು ಸಿನೆಮಾದ ಚಿತ್ರೀಕರಣವು ಕೊನೆಯ ಹಂತ ತಲುಪಿದ್ದು ಫೆಬ್ರವರಿ ಎರಡನೇ ವಾರದಲ್ಲಿ ಟೀಸರ್ ಬಿಡುಗಡೆಯಾಗಲಿದೆ.
ತುಳುನಾಡಿನ ವೀರಪುರುಷ ಎಂದೇ ಹೆಸರಾದ ಅಗೋಳಿ ಮಂಜಣ್ಣ ಒಬ್ಬ ಧೈರ್ಯಶಾಲಿ ವ್ಯಕ್ತಿಯಾಗಿದ್ದು ಆತ ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಅಂಗೋಲಿ ಮಂಜಣ್ಣ ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದು ಸುಮಾರು 200 ವರ್ಷಗಳ ಹಿಂದೆ ಮಂಗಳೂರಿನ ಸುರತ್ಕಲ್ ಸಮೀಪದ ಚೇಳಾರ್ ಗುತ್ತಿನಲ್ಲಿ ವಾಸವಾಗಿದ್ದರು. ಅವರ ಸಾಹಸದ ಜನಪದ ಕಥೆಯೇ ಈ ಸಿನೆಮಾದ ಜೀವಾಳವಾಗಿದೆ.
ಈ ಸಿನೆಮಾದ ನಿರ್ದೇಶನವನ್ನು ಸುಧೀರ್ ಅತ್ತಾವರ್ ಅವರು ಮಾಡಿದ್ದು ಮುಂಬೈನ ಸಕ್ಸಸ್ ಫಿಲ್ಮ್ಸ್ ಇಂಡಿಯಾ ಬ್ಯಾನರ್ನಡಿ ನಿರ್ಮಾಣವಾಗಿದೆ.ನಾಯಕಿಯಾಗಿ ಗುಜರಾತಿ ಚಿತ್ರರಂಗದ ಹಿಮಾಂಗಿನಿ ಕಾಣಿಸಿಕೊಂಡಿದ್ದು ಉಳಿದಂತೆ ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಮತ್ತು ಡಾ.ಮೋಹನ್ ಆಳ್ವ ಅವರು ಕೂಡಾ ಈ ಸಿನೆಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಬಾಲಿವುಡ್ನ ಕೆಲವು ನಟರು ಕೂಡಾ ಅಭಿನಯಿಸಿದ್ದಾರೆ.
ಈ ಸಿನೆಮಾದ ಚಿತ್ರೀಕರಣವನ್ನು ಬಾಲಿವುಡ್ನ ಶಫಿಖಾನ್ ಮಾಡಿದ್ದು ಚಂದ್ರಕಾಂತ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಸುಧೀರ್ ಅತ್ತಾವರ್ ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತ ಸಂಭಾಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆಯಲ್ಲಿ ಪ್ರೊಫೆಸರ್ ಜಯಪ್ರಕಾಶ್ ಮಾವಿನಕುಳಿ, ರಾಜಶೇಖರ್ ಜೋಗಿನ್ಮನೆ ಸಾಥ್ ನೀಡಿದ್ದಾರೆ.