ನವದೆಹಲಿ, ಫೆ 08 (Daijiworld News/MB) : ವಿದು ವಿನೋದ್ ಚೋಪ್ರಾ ನಿರ್ದೇಶನದ 'ಶಿಕಾರಾ' ಚಿತ್ರವನ್ನು ವೀಕ್ಷಿಸಿದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆಯೊಬ್ಬರು ಚಿತ್ರದಲ್ಲಿ ಕಥೆಯನ್ನು ತಿರುಚಲಾಗಿದೆ ಎಂದು ನಿರ್ದೇಶಕರ ವಿರುದ್ಧ ಚಿತ್ರಮಂದಿರದಲ್ಲಿಯೇ ವಾಗ್ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಸಿನಿಮಾ ವೀಕ್ಷಣೆ ಮಾಡಿದ ಮಹಿಳೆ, "ಚೋಪ್ರಾ ಅವರು 1990ರ ದಶಕದ ಕಾಶ್ಮೀರಿ ಪಂಡಿತರ ನಿಜವಾದ ಸಮಸ್ಯೆಗಳನ್ನು ವಾಣಿಜ್ಯೀಕರಣಗೊಳಿಸಿದ್ದಾರೆ ಹಾಗೂ ಇಸ್ಲಾಮಿಕ್ ಗುಂಪುಗಳು ಮಾಡಿದ ಜನಾಂಗೀಯ ಹತ್ಯೆ ಮತ್ತು ಸಾಮೂಹಿಕ ಅತ್ಯಾಚಾರ ಸೇರಿದಂತೆ ಸಮುದಾಯದ ನಿಜವಾದ ಸಂಕಷ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಿಲ್ಲ" ಎಂದು ಆರೋಪ ಮಾಡಿದ್ದಾರೆ.
ಇದೀಗ ಈ ಮಹಿಳೆ ಸಿನಿಮಾ ಮಂದಿರದಲ್ಲೇ ನಿರ್ದೇಶಕರ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ.
"ಸಮಸ್ಯೆಯನ್ನು ವಾಣಿಜ್ಯೀಕರಣ ಮಾಡಿದ ನಿಮಗೆ ಅಭಿನಂದನೆಗಳು. ಕಾಶ್ಮೀರಿ ಪಂಡಿತೆಯಾಗಿರುವ ನಾನು ನಿಮ್ಮ ಸಿನಿಮಾವನ್ನು ಬಹಿಷ್ಕಾರ ಮಾಡುತ್ತೇನೆ. ನೀವು ಸಿನಿಮಾದಲ್ಲಿ ಹೇಳಿರುವುದನ್ನು ನಾನು ಒಪ್ಪುವುದಿಲ್ಲ" ಎಂದು ಕೂಗಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೋಪ್ರಾ ಅವರು, "ಮಹಿಳೆಯರಿಗಾಗಿಯೇ ಈ ಸಿನಿಮಾದ ಎರಡನೇ ಭಾಗವನ್ನು ನಾನು ನಿರ್ದೇಶನ ಮಾಡುತ್ತೇನೆ. ಸತ್ಯಕ್ಕೆ ಎರಡು ಮುಖಗಳಿವೆ ಮತ್ತು ಜನರು ಒಂದೇ ವಿಚಾರಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಈಗ ನಾನು ನಿಮಗಾಗಿಯೇ ಸಿನಿಮಾದ ಮುಂದುವರಿದ ಭಾಗವನ್ನು ಮಾಡುತ್ತೇನೆ" ಎಂದು ಹೇಳಿದರು.
'ಶಿಕಾರ' ಸಿನಿಮಾ ಫೆಬ್ರುವರಿ 7ರಂದು ದೇಶದಾದ್ಯಂತ ಬಿಡುಗಡೆಯಾಗಿದ್ದು ನವಿರಾದ ಪ್ರೇಮ ಕಥೆಯೊಂದಿಗೆ ಕಾಶ್ಮೀರ ಪಂಡಿತರ ಸಾಮೂಹಿಕ ವಲಸೆಯ ಕಥಾ ಹಂದರವಿರುವ ಸಿನಿಮಾ ಇದಾಗಿದೆ.