ಮಂಗಳೂರು, ಫೆ.07 (Daijiworld News/PY): ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣೆಯಾಗಿದ್ದಾರೆ ಎಂಬ ಹೆಡ್ಡಿಂಗ್ನಲ್ಲಿ ಕನ್ನಡಕ ಹಾಗೂ ಕೋಟು ಧರಿಸಿ ಕೈಕಟ್ಟಿದ್ದ ಬೋಳುಮಂಡೆಯ ವ್ಯಕ್ತಿಯೊಬ್ಬರ ಫೋಟೋ ವೈರಲ್ ಆಗಿದ್ದು, ಇದನ್ನು ಓದಿದವರಿಗೆ ಇದೊಂದು ಕಾಣೆಯಾದ ವ್ಯಕ್ತಿಯ ಅಸಲಿ ಪ್ರಕಟಣೆಯಲ್ಲ ಎಂದು ತಿಳಿಯುತ್ತದೆ.
ಈ ಪೋಸ್ಟರ್ ಅನ್ನು ಮತ್ತಷ್ಟು ಸಮೀಪದಿಂದ ನೋಡಿದರೆ ಇದರಲ್ಲಿರುವ ವ್ಯಕ್ತಿ ನವೀನ್ ಡಿ ಪಡೀಲ್ ಅವರು ಎಂಬುದು ತಿಳಿಯುತ್ತದೆ. ಇದು ಸದ್ಯದಲ್ಲೆ ಬಿಡುಗಡೆಯಾಗಲಿರುವ ಇಂಗ್ಲೀಷ್ ಸಿನಿಮಾದ ಪ್ರಚಾರದ ಸಲುವಾಗಿ ಮಾಡಿದ ಪೋಸ್ಟರ್ ಆಗಿದೆ.
ಇಂಗ್ಲೀಷ್ ಸಿನಿಮಾದ ಆಕರ್ಷಕವಾದ ಈ ಪೋಸ್ಟರ್ನಲ್ಲಿ ಮಿ.ಪೊಡಿ ದಾಮು, ಪ್ರಾಯ ಅಂದಾಜಾಗುವುದಿಲ್ಲ, ರಾಗಿ ಬಣ್ಣ, ಕುರ್ತೆಲ್ ಮೈಕಟ್ಟು, ಕುರೆಪಟ್ಟ್ ಮುಖ, ಸಾಣೆ ಮಂಡೆ, ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ನೈಂಟಿ ಹಾಕಿದರೆ ಇಂಗ್ಲೀಷ್ ಒಟ್ರಾಸಿ ಮಾತಾಡ್ತಾರೆ. ಮಾ.20ರ ಒಳಗೆ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಇದರ ಪಕ್ಕದಲ್ಲಿ ಓ ಪೊಡಿ ದಾಮು, ಎಲ್ಲಿದ್ದರೂ ಮನೆಗೆ ಬಾ.. ನಿನ್ನ ಆಗಮನದ ನಿರೀಕ್ಷೆಯಲ್ಲಿರುವ ದುಃಖತಪ್ತ ಕುಟುಂಬಸ್ಥರು ಎಂದು ಬರೆಯಲಾಗಿದೆ. ನಿಜವಾಗಿ ಇದೊಂದು ಆಕರ್ಷಕ ಪೋಸ್ಟರ್ ಆಗಿದ್ದು, ನೂತನ ಶೈಲಿಯಲ್ಲಿ ಸಿನಿಮಾದ ಪ್ರಚಾರಕ್ಕಾಗಿ ಬಳಸಿದ್ದಾರೆ.
ಆಕ್ಮೆ ಮೂವೀಸ್ ಇಂಟರ್ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ "ಇಂಗ್ಲೀಷ್" ತುಳು ಸಿನಿಮಾ ಮಾರ್ಚ್ 20ರಂದು ಬಿಡುಗಡೆಯಾಗಲಿದೆ.