ಮಂಗಳೂರು, ಫೆ 06 (Daijiworld News/MB) : ತುಳು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ, ಇತ್ತೀಚೆಗೆ 150ರ ಸಂಭ್ರಮವನ್ನು ದಾಖಲಿಸಿ ಸಾಗುತ್ತಿರುವ ಗಿರಿಗಿಟ್ ಸಿನಿಮಾ ತಂಡ 'ಸರ್ಕಸ್' ಸಿನಿಮಾ ಮಾಡಲು ಮುಂದಾಗಿದ್ದು ಶೀಘ್ರವೇ ಸೆಟ್ ಏರಲಿದೆ.
ಬುಧವಾರ ನಿರ್ದೇಶಕ ರೂಪೇಶ್ ಶೆಟ್ಟಿ ಅವರೇ ತಮ್ಮ ಹೊಸ ಸಿನಿಮಾದ ಟೈಟಲ್ನ್ನು ಪ್ರಕಟಿಸಿದ್ದು ಈ ಸಿನಿಮಾದಲ್ಲಿ ಗಿರಿಗಿಟ್ ತಂಡದಲ್ಲಿದ್ದ ಹೆಚ್ಚಿನ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಗಿರಿಗಿಟ್ ಸಿನಿಮಾದ ಮೂಲಕ ತುಳು ಸಿನಿಮಾ ರಂಗದಲ್ಲೇ ದಾಖಲೆ ಬರೆದಿರುವ ಈ ಸಿನಿಮಾ ತಂಡವೇ ಸರ್ಕಸ್ ಎಂಬ ಹೊಸ ಸಿನಿಮಾ ಮಾಡಲು ಮುಂದಾಗಿರುವ ಹಿನ್ನಲೆಯಲ್ಲಿ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ.
ಈ ಮೊದಲು ತಂಡ 'ಗಿರಿಗಿಟ್ -2' ಸಿನಿಮಾ ಮಾಡಲು ಮುಂದಾಗಿದ್ದು ಬಳಿಕ ಆ ಯೋಜನೆ ಕೈಬಿಟ್ಟು ಸರ್ಕಸ್ ಸಿನಿಮಾ ಮಾಡಲು ತೀರ್ಮಾನ ಮಾಡಿದೆ.
ಈ ಹೊಸ ಸಿನಿಮಾದ ನಿರ್ದೇಶನವನ್ನು ರೂಪೇಶ್ ಅವರೇ ಮಾಡಲಿದ್ದಾರೆ ಎಂದು ತಿಳಿದು ಬಂದಿದ್ದು ರೂಪೇಶ್ ಕನ್ನಡ ಸಿನಿಮಾದಲ್ಲಿ ಬಿಝಿಯಾಗಿರುವ ಹಿನ್ನಲೆಯಲ್ಲಿ ಎಪ್ರಿಲ್ ಅಥವಾ ಮೇಯಲ್ಲಿ ಹೊಸ ಸಿನಿಮಾ ಸೆಟ್ ಏರಲಿದೆ.
ದೇಶ ವಿದೇಶಗಳಲ್ಲಿಯೂ ತನ್ನ ಚಾಪು ಮೂಡಿಸಿರುವ ಗಿರಿಗಿಟ್ ಸಿನಿಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದ ಹಿರಿಯ ನಟರಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ.
ರೂಪೇಶ್ ಈ ಬಗ್ಗೆ ಮಾತನಾಡಿದ್ದು, "ಕೋಸ್ಟಲ್ವುಡ್ನಲ್ಲಿ ಗಿರಿಗಿಟ್ ಸಿನಿಮಾ ಹೊಸ ಅಧ್ಯಾಯ ಬರೆದಿದೆ. ಈ ಸಿನಿಮಾಕ್ಕೆ ದೇಶ ವಿದೇಶದಲ್ಲೂ ಉತ್ತಮ ಸ್ಪಂದನೆ ದೊರೆತಿದೆ. ದ.ಕ., ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಭಾಗದಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಬಹಳಷ್ಟು ಜನರು ಮುಂದೆ ಗಿರಿಗಿಟ್-2 ಸಿನಿಮಾ ಮಾಡುವಂತೆ ಒತ್ತಾಯಿಸಿದ್ದರು. ಹಾಗೆಯೇ ನಮ್ಮ ತಂಡಕ್ಕೂ ಹೊಸ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಆ ಹಿನ್ನಲೆಯಲ್ಲಿ ನಾವು ತೀರ್ಮಾನ ಕೈಗೊಂಡು ಸರ್ಕಸ್ ಎಂಬ ಟೈಟಲ್ ಫಿಕ್ಸ್ ಮಾಡಿದೆವು" ಎಂದು ತಿಳಿಸಿದ್ದಾರೆ.
"ಈ ಸಿನಿಮಾವನ್ನು ಈ ವರ್ಷದಲ್ಲೇ ಬಿಡುಗಡೆ ಮಾಡಬೇಕು ಎಂಬ ನಿರೀಕ್ಷಿಸಿದ್ದೇವೆ. ಇದೀಗ ನನಗೆ ಶೈಲೇಂದ್ರ ಬಾಬು ನಿರ್ಮಾಣದ ಅದ್ದೂರಿ ಬಜೆಟ್ನ ಕನ್ನಡ ಸಿನೆಮಾದಲ್ಲಿ ಪಾತ್ರ ಮಾಡುವ ಅವಕಾಶ ದೊರೆತಿದೆ. ಭಾವನಾ ಮೆನನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಪ್ರಥಮ ಹಂತದ ಚಿತ್ರೀಕರಣ ಈಗಾಗಲೇ ಆಗಿದ್ದು ಎರಡನೇ ಹಂತದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಸರ್ಕಸ್ ಚಿತ್ರೀಕರಣ ಮಾಡಲಾಗುತ್ತದೆ. ಸರ್ಕಸ್ ಸಿನಿಮಾದಲ್ಲಿ ಗಿರಿಗಿಟ್ ತಂಡವೇ ಇರಲಿದೆ" ಎಂದು ಹೇಳಿದ್ದಾರೆ.