ಕುಂದಾಪುರ, ಫೆ 3 (Daijiworld News/MSP): ಬಿಗ್ಬಾಸ್ ಸೀಸನ್ 7 ರಲ್ಲಿ ಕುಂದಾಪುರ ಸಂಸ್ಕೃತಿಯ ಅನಾವರಣವಾಗಿತ್ತು. ಈ ಬಾರಿಯ ಕೊನೆಯ ತನಕ ಕುಂದಾಪುರದವರಾದ ಶೈನ್ ಶೆಟ್ಟಿ, ಹಾಗೂ ಭೂಮಿ ಶೆಟ್ಟಿ ಕುಂದಾಪುರ ಭಾಷೆ, ಸಂಸ್ಕತಿ, ಹಬ್ಬ ಹರಿದಿನಗಳ ಬಗ್ಗೆ ರಂಜಿಸುತ್ತಲೇ ಬಂದವರು. ಕೊನೆಗೂ ಕುಂದಾಪುರ ಕೊಡ್ಲಾಡಿಯ ಶೈನ್ ಶೆಟ್ಟಿಯವರು ಬಿಗ್ಬಾಸ್ 7 ಕಿರೀಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಸೀಸನ್ನ ಆರಂಭದಿಂದಲೂ ಶೈನ್ ಶೆಟ್ಟಿ ವೀಕ್ಷಕರಿಂದ ಶೈನ್ ಆಗುತ್ತಲೇ ಬಂದವರು. 112 ದಿನಗಳ ಮಹಾ ಪಯಣದಲ್ಲಿ ಟಾಸ್ಕ್ನಲ್ಲಿ ಅವರ ಫರ್ಮಮನ್ಸ್ ಆಗಲಿ, ಅಟಿಟ್ಯೂಡ್ ಆಗಲಿ, ಮನೆಯ ಒಳಗಿನ ನಡವಳಿಕೆ, ಸಹಸ್ಪರ್ಧಿಗಳ ಜೊತೆ ಬಾಂಧವ್ಯ ಕನ್ನಡಿಗರ ಮನ ಗೆದ್ದಿತ್ತು. ಗ್ರ್ಯಾಂಡ್ ಫಿನಾಲೆಯಲ್ಲಿ ವಾಸುಕಿ ವೈಭವ್ ಮನೆಯಿಂದ ಹೊರಬಂದ ಬಳಿಕ ಕುರಿ ಪ್ರತಾಪ್ ಹಾಗೂ ಶೈನ್ ಶೆಟ್ಟಿ ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೂ ಸುದೀಪ್ ಅವರು ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ಎಂದು ಘೋಷಿಸಿಯೇ ಬಿಟ್ಟರು.
ಶೈನ್ ಶೆಟ್ಟಿ ಅಪ್ಪಟ ಕುಂದಾಪುರದ ಪ್ರತಿಭೆ. ಕುಂದಾಪರ ತಾಲೂಕಿನ ಕೊಡ್ಲಾಡಿ ಇವರ ತಾಯಿಮನೆ. ಶರತ್ಚಂದ್ರ ಶೆಟ್ಟಿ ಮತ್ತು ಇಂದಿರಾ ಶೆಟ್ಟಿ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವ ಶೈನ್. ಕೊಡ್ಲಾಡಿ ದೊಡ್ಮನೆಯಲ್ಲಿಯೇ ಇವರು ಬಾಲ್ಯ ದಿನಗಳನ್ನು ಕಳೆದಿದ್ದರು. ಇವರ ತಂದೆ ಮನೆ ಆರ್ಡಿ ದೊಡ್ಮನೆ. ಪ್ರಸ್ತುತ ಉಡುಪಿ ಆತ್ರಾಡಿಯಲ್ಲಿ ಸ್ವಂತ ಮನೆ ಖರೀದಿಸಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಆದರೂ ಕೂಡಾ ತಾಯಿ ಮನೆ ಕೊಡ್ಲಾಡಿಗೆ ಶೈನ್ ಸದಾ ಬರುತ್ತಾರೆ. ಕೊಡ್ಲಾಡಿ ಸುರ್ಗೇಡಿ ದೈವಸ್ಥಾನದ ಹಬ್ಬಕ್ಕೆ, ಈ ಭಾಗದಲ್ಲಿ ಏನೇ ಕಾರ್ಯಕ್ರಮ ಆದರೂ ಶೈನ್ ಬರುತ್ತಾರೆ. ಶೈನ್ ಅಭಿಮಾನಿಗಳು, ಸ್ನೇಹಿತರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ತೀರಾ ಗ್ರಾಮೀಣ ಪ್ರದೇಶವಾದ ಕೊಡ್ಲಾಡಿಯಲ್ಲಿ ಶೈನ್ ಓಡಾಡಿದ ನೆನಪುಗಳನ್ನು ಇಲ್ಲಿನ ಜನ ನೆನಪಿಸಿಕೊಳ್ಳುತ್ತಾರೆ. ಕನ್ನಡದ ವಾಹಿನಿಯೊಂದರ ಮೂಲಕ 112 ದಿನಗಳ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಪ್ರಬಲ ಸ್ಪರ್ಧಿಗಳ ಎದುರು ವಿವಿಧ ಟಾಸ್ಕ್ಗಳಲ್ಲಿ ವಿಜಯಿಯಾಗಿ, ಅಭಿಮಾನಿಗಳ ಭರಪೂರ ವೋಟ್ಗಳ ಮೂಲಕ ಜಯಶಾಲಿಯಾಗುವುದು ಎಂದರೆ ಸುಲಭದ ವಿಚಾರವಲ್ಲ.
ಶೈನ್ ಬ್ರಹ್ಮಾವರದ ಲಿಟ್ಲ್ರಾಕ್, ಉಡುಪಿಯ ಕ್ರಿಸ್ಚಿಯನ್ ಪಿ.ಯು ಕಾಲೇಜು, ಮಣಿಪಾಲದ ಎಂ.ಪಿ.ಎಂಸಿ, ಹೆಬ್ರಿಯ ನವೋದಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಪದವಿ ಓದುತ್ತಿದ್ದಾಗ ಉಡುಪಿಯ ಸ್ಥಳೀಯ ವಾಹಿನಿಯೊಂದರಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಅವಕಾಶ ಒದಗಿ ಬಂತು. ನಂತರ ಕನಕ, ಮೀರಾ ಮಾಧವ, ಕೋಗಿಲೆ ಮೊದಲಾದ ಸೀರಿಯಲ್ನಲ್ಲಿ ನಟಿಸಿದರು. ಸ್ವಲ್ಪ ದಿನ ಹಿಮಾಲಯಕ್ಕೂ ಹೋಗಿ ಬಂದರು. ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡುವ ತುಡಿತ ಅವರಿಗಿತ್ತು. ಒಳ್ಳೆಯ ಕಲಾವಿದರಾಗಿದ್ದ ಅವರು ನಟಿಸಿದ ಧಾರಾವಾಹಿಗಳು ಅವರಿಗೆ ಒಳ್ಳೆಯ ಖ್ಯಾತಿ ತಂದುಕೊಟ್ಟಿದ್ದವು. ಬೆಳ್ಳಿತೆರೆಯಲ್ಲಿ ಅವರು ಸ.ಹಿ.ಪ್ರಾ.ಶಾಲೆ ಕಾಸರಗೋಡು, ಒಂದು ಮೊಟ್ಟೆಯ ಕಥೆ, ಅಸ್ತಿತ್ವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜೀವನ ಯಜ್ಞ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ತುಳುವಿನಲ್ಲಿ ಕುಡ್ಲ ಕೆಫೆ, ರಂಗ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರ ನಿರೀಕ್ಷೆಯ ಪಾತ್ರಗಳು ಚಿತ್ರರಂಗದಲ್ಲಿ ದೊರಕದಿದ್ದಾಗ ತುಸು ಬೇಸರಗೊಂಡಿದ್ದರು. ಆದರೆ ಅವಕಾಶಗಳಿಗಾಗಿ ಕಾಯುತ್ತಿದ್ದರು.
ಒಂದು ದಿನ ತಳ್ಳೋ ಗಾಡಿಯಲ್ಲಿ ಊಟ ಮಾಡುತ್ತಿದ್ದಾಗ, ತಾವು ಒಂದು ಆ ತರ ಆಹಾರ ಗಾಡಿ ಮಾಡಬೇಕೆಂದು ಅಂದುಕೊಂಡು, ತಮ್ಮ ತಂದೆಯ ಸ್ನೇಹಿತರಿಂದ ಸಾಲ ಪಡೆದು 'ಗಲ್ಲಿ ಕಿಚನ್' ಎಂಬ ಹೆಸರಿಟ್ಟು ಆಹಾರದ ಗಾಡಿಯೊಂದನ್ನು ಮಾಡುತ್ತಾರೆ. ಬೆಂಗಳೂರಿನ ಬನಶಂಕರಿಯಲ್ಲಿ ತಮ್ಮ ಗಾಡಿಯಲ್ಲಿ ಆಹಾರ ತಯಾರಿಸಿ ನೀಡುವ ಮೊಬೈಲ್ ಕ್ಯಾಂಟೀನ್ ತೆರೆದಿದ್ದರು.
"ಶೈನ್ ನನ್ನ ತಂಗಿಯ ಮಗ. ಬಾಲ್ಯದಿಂದಲೂ ಆತ ಸಿನಿಮಾ ಧಾರಾವಾಹಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡವ. ಕಳೆದ ಏಳು ವರ್ಷಗಳ ಹಿಂದೆ ಆತ ಬೆಂಗಳೂರಿಗೆ ಹೋದ. ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾನೆ. ಈಗ ಬಿಗ್ಬಾಸ್ನಲ್ಲಿ ಗೆಲುವು ಸಾಧಿಸಿದ್ದಾನೆ. ನಮಗೆಲ್ಲಾ ಖುಷಿಯಾಗುತ್ತಿದೆ"-ಮನೋಹರ್ ಶೆಟ್ಟಿ ಕೊಡ್ಲಾಡಿ.