ಬೆಂಗಳೂರು, ಫೆ 02 (Daijiworld News/MB) : ಆ ದಿನಗಳು ಚಿತ್ರದ ಖ್ಯಾತಿಯ ನಟ ಚೇತನ್ ಅಹಿಂಸಾ ಹಾಗೂ ಮೇಘಾ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಮದುವೆಯಾಗಿದ್ದಾರೆ.
ಸದಾ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಚೇತನ್ ಅವರು ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ ಶನಿವಾರ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿರುವ ಚೇತನ್-ಮೇಘಾ ಭಾನುವಾರ ಆಶ್ರಮದಲ್ಲಿ ಮದುವೆ ಕಾರ್ಯ ಮಾಡಿಕೊಂಡಿದ್ದಾರೆ.
ಶನಿವಾರ ತಾವು ವಿವಾಹ ಜೀವನಕ್ಕೆ ಕಾಲಿಟ್ಟ ಕುರಿತು ಚೇತನ್ ಅವರೇ ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದು ಅದರಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಗಾಂಧಿನಗರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ಮೇಘಾ ಮತ್ತು ನನ್ನ ವಿವಾಹ ಎಂದು ಬರೆದುಕೊಂಡಿದ್ದಾರೆ.
ಈ ಜೋಡಿಯ ರಿಜಿಸ್ಟಾರ್ ಮದುವೆ ಬಳಿಕ ಸಂವಿಧಾನ ಓದು ಪುಸ್ತಕವನ್ನು ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ.
ಈ ಹಿಂದೆ ಈ ಜೋಡಿ ಸೇರಿ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ನೀಡಿ ಮಕ್ಕಳು ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ಬಗ್ಗೆ ಚೇತನ್ ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು ಜೋಡಿ ಜೊತೆ ಸೇರಿ ಮಾಡಿದ ಈ ಸೇವೆಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಚೇತನ್ ಹಾಗೂ ಮೇಘಾ ಪ್ರೀವೆಡ್ಡಿಂಗ್ ಶೂಟ್ ಮಾಡಿದ್ದು ಅದನ್ನು ಕೂಡಾ ಅನಾಥ ಮಕ್ಕಳ ಜೊತೆಯಲ್ಲಿ ಮಾಡಿಕೊಂಡಿದ್ದಾರೆ. ಮಕ್ಕಳೊಂದಿಗೆ ಬಣ್ಣದಾಟ, ಬುಗುರಿ ಆಟ, ಪೇಟಿಂಗ್ ಮಾಡಿಸಿದ್ದರು. ಈ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು.