ಶಿವಮೊಗ್ಗ, ಜ.31 (Daijiworld News/PY) : 200 ಹಳೆಯ ಚಿತ್ರಗಳನ್ನು ಡಿಜಿಟಲೈಸ್ ಮಾಡಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದ್ದಾರೆ.
ಶಿವಮೊಗ್ಗ ಟ್ರಸ್ಟ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಪುರಾಣಿಕ್ ಅವರು, ಪ್ರತೀ ವರ್ಷ ಸುಮಾರು 100-200 ಚಲನಚಿತ್ರಗಳನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದರು.
ಈ ಬಾರಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 30ಕ್ಕೂ ಹೆಚ್ಚು ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ನಮ್ಮ ಚಿತ್ರರಂಗವನ್ನು ಯುವ ಜನತೆಗೆ ಪರಿಚಯಿಸುವ ಉದ್ದೇಶವಿದೆ. ಅಲ್ಲದೇ, ಚಿತ್ರದುರ್ಗ, ಬೇಲೂರು, ಹಳೆಬೀಡು, ಬಾದಾಮಿ, ಮೈಸೂರು, ಹಂಪಿ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಲ್ಲಿ ಆಡಿಯೋ,ವಿಡಿಯೋಗಳ ಮುಖಾಂತರ ಕನ್ನಡ ಚಿತ್ರರಂಗ ಬೆಳೆದುಬಂದ ಹಾದಿಯನ್ನು ಜನತೆಗೆ ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. ಇದರ ಜೊತೆಗೆ ಶಿವಮೊಗ್ಗದಲ್ಲಿ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ಹಿರಿಯ ನಿರ್ದೇಶಕರು, ನಟರು, ನಿರ್ಮಾಪಕರ ಕೊಡುಗೆಗಳನ್ನು ಬಿಂಬಿಸಲು ಅವರ ಪ್ರೊಫೈಲ್ಗಳನ್ನು ಸಿದ್ಧಪಡಿಸಿ ಅಕಾಡೆಮಿಯಲ್ಲಿ ಪ್ರದರ್ಶಿಸಲಾಗುತ್ತದೆ. ಯುವಕರಿಗೆ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ಗ್ರಾಫಿಕ್ ಡಿಸೈನ್, ಅನಿಮೇಷನ್ ಕೋರ್ಸ್ಗಳನ್ನು ನಡೆಸಲಾಗುವು. ಸರ್ಕಾರ ಅಕಾಡೆಮಿಗೆ 2.5 ಎಕರೆ ಜಾಗ ನೀಡಿದ್ದು, ಅದರಲ್ಲಿ ಫಿಲ್ಮ್ ಕಾಂಪ್ಲೆಕ್ಸ್ ಆರಂಭಿಸುವ ಉದ್ದೇಶವಿದೆ. 4-5 ಥಿಯೇಟರ್ಗಳನ್ನು ನಿರ್ವಿುಸುವ ಚಿಂತನೆಯೂ ಇದೆ. ಜೊತೆಗೆ ಚಿತ್ರರಂಗದ ಅಲ್ಪಾವಧಿ ಕೋರ್ಸ್ಗಳನ್ನು ನಡೆಸಲು ನಿರ್ಧರಿಸಿದ್ದು ಸರ್ಕಾರಕ್ಕೆ 20 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.