ಮುಂಬೈ, ಜ 28 ( Daijiworld News/MB) : ಬಾಲಿವುಡ್ನ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರು ಪೋರ್ನ್ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದರು ಎಂದು 33 ವರ್ಷದ ಮಹಿಳೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್ಸಿಡಬ್ಲ್ಯು)ಗೆ ಪತ್ರ ಬರೆದು ದೂರು ನೀಡಿದ್ದಾರೆ. ಹಾಗೆಯೇ ಅಂಬೋಲಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ.
ನಾನು ಆಚಾರ್ಯ ಅವರ ಕಚೇರಿಗೆ ಹೋದಾಗಲೆಲ್ಲಾ ಪೋರ್ನ್ ವಿಡಿಯೋಗಳನ್ನು ನೋಡಲು ಒತ್ತಾಯಿಸುತ್ತಿದ್ದರು. ಅಷ್ಟು ಮಾತ್ರವಲ್ಲದೇ ನನಗೆ ಬರುವ ಆದಾಯದಲ್ಲಿ ಕಮಿಷನ್ ಕೊಡಬೇಕು ಬೇಡಿಕೆ ಮಾಡಿದ್ದರು ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ಮುಂಬೈನ ಅಂಧೇರಿಯಲ್ಲಿ ಭಾನುವಾರ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನೃತ್ಯ ಸಂಯೋಜಕರ ಸಂಘ (ಐಎಫ್ಟಿಸಿಎ)ದ ಸಮಾರಂಭ ನಡೆದಿತ್ತು. ಅಲ್ಲಿ ಗಣೇಶ್ ಆಚಾರ್ಯ ಜೊತೆಗೆ ಜಯಶ್ರೀ ಕೆಲ್ಕರ್ ಮತ್ತು ಪ್ರೀತಿ ಲಾಡ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆ ನೃತ್ಯ ಸಂಯೋಜಕ ಸಂಘದ ಸದಸ್ಯೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಣೇಶ್ ಆಚಾರ್ಯ ಆಗಾಗ ಕಚೇರಿಗೆ ಕರೆಯುತ್ತಿದ್ದರು. ಕಚೇರಿಗೆ ಜನವರಿ 26 ರಂದು ಹೋಗಿದ್ದು ನೃತ್ಯ ಸಂಯೋಜಕ ಸಂಘದಲ್ಲಿ ಸದಸ್ಯತ್ವ ರದ್ದು ಮಾಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ತಂಡದ ಸದಸ್ಯ ಜಯಶ್ರೀ ಕೇಲ್ಕರ್ ಅವರನ್ನು ಕರೆದು ನನಗೆ ಹೊಡೆಯುವಂತೆ ಹೇಳಿದ್ದರು ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಗಣೇಶ್ ಆಚಾರ್ಯ ಅವರು ನೃತ್ಯಗಾರರನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಆರೋಪ ಮಾಡಿದ್ದರು.
ಗಣೇಶ್ ಆಚಾರ್ಯ ಅವರು ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹಿಂದಿ 'ಗಲಿ ಗಲಿ ಮೇ' ಹಾಡು, ಅಲ್ಲದೇ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಇಂಟ್ರೋ ಹಾಡಿಗೆ ಗಣೇಶ್ ನೃತ್ಯ ಸಂಯೋಜನ ಮಾಡಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.