ಮುಂಬೈ, ಜ.26 (Daijiworld News/PY) : ನಾನು ಮುಸ್ಲಿಂ, ಹೆಂಡತಿ ಹಿಂದೂ, ನನ್ನ ಮಕ್ಕಳು ಭಾರತೀಯರು ಎಂದು ಬಾಲಿವುಡ್ ನಟ ಶಾರುಖ್ ಖಾನ್ ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಶಾರುಖ್ ಖಾನ್, ನಾನು ಮುಸ್ಲಿಂ, ನನ್ನ ಹೆಂಡತಿ ಹಿಂದೂ. ಆದರೆ ನಮ್ಮಿಬ್ಬರ ಸಂಸಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ನಮ್ಮ ಧರ್ಮ ಯಾವುದು ಎನ್ನುವುದಕ್ಕಿಂತಲೂ, ನಾವು ಭಾರತೀಯರು ಎಂದು ಹೇಳಿದ್ದಾರೆ.
ನಾವು ಎಂದಿಗೂ ಮನೆಯಲ್ಲಿ ಧರ್ಮದ ವಿಚಾರವಾಗಿ ಚರ್ಚಿಸಿಲ್ಲ. ನನ್ನ ಮಗಳು ಒಂದು ದಿನ ನನ್ನ ಬಳಿ ಬಂದು ನಮ್ಮ ಧರ್ಮ ಯಾವುದು ಅಂತಾ ಕೇಳಿದ್ದಳು. ಅದಕ್ಕೆ ನಾನು ನಾವು ಭಾರತೀಯರು ಎಂದು ಹೇಳಿ ಶಾಲಾ ಅರ್ಜಿಯಲ್ಲಿ ಭಾರತೀಯರು ಅಂತ ಬರೆಸಿದ್ದೆ ಎಂದು ಹೇಳಿದ್ದಾರೆ.
ಸದ್ಯ ಶಾರುಖ್ ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.