ಮುಂಬೈ, ಜ 22 (Daijiworld News/MB) : ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ 'ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ' ಎಂದು ನಟ ಸೈಫ್ ಅಲಿ ಖಾನ್ ಹೇಳಿದ್ದು ಈಗ ಬಹಳ ಚರ್ಚೆಗೆ ಕಾರಣವಾಗಿದ್ದು ಟ್ವಿಟರ್ನಲ್ಲಿ ಅನೇಕರು ತಿರುಗೇಟು ನೀಡಿದ್ದಾರೆ.
ತಾನಾಜಿ: ದಿ ಅನ್ಸಂಗ್ ವಾರಿಯರ್ ಸಿನಿಮಾದಲ್ಲಿ ಉದಯ್ ಭಾನು ಸಿಂಗ್ ಪಾತ್ರ ಮಾಡಿದ್ದ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ, 'ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದು ಹೇಳಿದ್ದರು. ನನಗೆ ಇತಿಹಾಸ ಬಗ್ಗೆ ಸಾಕಷ್ಟು ಅರಿವಿದೆ' ಎಂದೂ ಹೇಳಿದ್ದರು.
'ಬಾಲಿವುಡ್ನ ಇತಿಹಾಸ ತಜ್ಞ ಸೈಫ್ ಅಲಿ ಖಾನ್ ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ ಎಂದು ಪ್ರತಿಪಾನೆ ಮಾಡಿದ್ದಾರೆ. ಸರಿ, ಹಾಗಿದ್ದರೆ ಈಸ್ಟ್ ಇಂಡಿಯಾ ಕಂಪನಿ ಚೀನಾಕ್ಕೆ ಸಂಬಂಧಿಸಿದ್ದು ಮತ್ತು ವಾಸ್ಕೊ ಡ ಗಾಮಾ ಫಿಜಿಗೆ ತೆರಳಿದ್ದ. ಕಳೆದ ಬಾರಿ ಖಾನ್ ಅವರು ಮಗನಿಗೆ ತೈಮೂರ್ ಎಂದು ಹೆಸರಿಡುವ ಮೂಲಕ ಇತಿಹಾಸವನ್ನು ಸ್ಮರಿಸಿಕೊಂಡಿದ್ದರು' ಎಂದು ಲೇಖಕ ತಾರೀಖ್ ಫತಾಹ್ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ.
ಹಾಗೆಯೇ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಕೂಡಾ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, 'ಟರ್ಕಿಯ ಜನರೂ ತೈಮೂರ್ ಕ್ರೂರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲವು ಜನರು ಅವರ ಮಕ್ಕಳಿಗೆ ತೈಮೂರ್ನ ಹೆಸರಿಡುತ್ತಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ಕೆಲವರು ಸೈಫ್ಗೆ ಬೆಂಬಲ ನೀಡಿದ್ದು , ಚರ್ಚೆಯಲ್ಲಿ ಅವರ ಮಗನ ಹೆಸರು ಎಳೆದು ತಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಬ್ರಿಟಿಷರು ಬರುವವರೆಗೆ ಭಾರತ ಎಂಬ ಪರಿಕಲ್ಪನೆಯೇ ಇರಲಿಲ್ಲ. ಇತಿಹಾಸ ತಜ್ಞ ಸೈಫ್ ಅಲಿ ಖಾನ್.. ಅಣ್ಣಾ, ಹಾಗಿದ್ದರೆ ಈಸ್ಟ್ ಇಂಡಿಯಾ ಕಂಪನಿಗೆ ಬ್ರಿಟಿಷರು ಜಾಂಟಿ ರೋಡ್ಸ್ ಮಗಳ ಹೆಸರನ್ನು ಇಟ್ಟಿದ್ದರೇ?' ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಮಗನ ಹೆಸರಿನ ಬಗ್ಗೆ ಸ್ಪಷ್ಟನೆ ನೀಡಿರುವ ಸೈಫ್ ಅಲಿ ಖಾನ್, ಐತಿಹಾಸಿಕ ವ್ಯಕ್ತಿಯ ಹೆಸರನ್ನು ಮಗನಿಗೆ ಇಟ್ಟಿಲ್ಲ. ನನಗೆ ಟರ್ಕಿಯ ಆಡಳಿತಗಾರನ ಬಗ್ಗೆ ತಿಳಿದಿದೆ. ಅವನ ಹೆಸರನ್ನು ಮಗನಿಗೆ ಇಟ್ಟಿಲ್ಲ. ಅದೇ ರೀತಿಯ ಹೆಸರು ಹೌದು. ಆದರೆ, ಎರಡರ ಮಧ್ಯೆ ವ್ಯತ್ಯಾಸವಿದೆ. ಟರ್ಕಿಯ ಆಡಳಿತಗಾರನ ಹೆಸರು "Timur", ನನ್ನ ಮಗನ ಹೆಸರು "Taimur" ಎಂದು ಖಾನ್ ಹೇಳಿದ್ದರು.