ಬೆಂಗಳೂರು, ಜ 21 (Daijiworld News/MB) : ನಟನೆ ಮಾತ್ರವಲ್ಲದೇ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಟ ಚೇತನ್ ಅಹಿಂಸಾ ಇದೀಗ ತಮ್ಮ ವಿವಾಹದ ಮೂಲಕವೂ ಜನರ ಗಮನ ಸೆಳೆದಿದ್ದಾರೆ.
ಚೇತನ್ ಹಾಗೂ ಮೇಘಾ ಜೋಡಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಮುದ್ರಿಸಲಾಗಿದ್ದು ಅದು ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆಯಾಗಿದೆ. ಆ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಜೀಜವನ್ನು ಹುದುಗಿಸಿ ಇಡಲಾಗಿದ್ದು ಅದನ್ನು ಎಲ್ಲಿ ಎಸೆದರು ಅದು ಅಲ್ಲಿ ಚಿಗುರೊಡೆಯುತ್ತದೆ.
ಅಷ್ಟು ಮಾತ್ರವಲ್ಲದೇ ಫೆಬ್ರವರಿ 2 ರಂದು ಅವರ ವಿವಾಹ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಯಾವುದೇ ಆಡಂಭರವಿಲ್ಲದೆ ಸರಳವಾಗಿ ನಡೆಯಲಿದೆ.
ಹಾಗೆಯೇ ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.