ಬೆಂಗಳೂರು, ಜ.08 (Daijiworld News/PY) : ಜೆಎನ್ಯು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ನಟಿ ದೀಪಿಕಾ ಪಡುಕೋಣೆ ಪರ-ವಿರೋಧ ಮಾತುಗಳು ಕೇಳಿಬರುತ್ತಿದ್ದು, ನಟಿ ದೀಪಿಕಾ ಪಡುಕೋಣೆ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾದಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.
ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ವೇಳೆ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ದಾಳಿಯಾದ ಹಿನ್ನೆಲೆ ಮಂಗಳವಾರ ಸಂಜೆ ದೀಪಿಕಾ ಪಡುಕೋಣೆ ಜೆಎನ್ಯುಗೆ ತೆರಳಿದ್ದರು. ಕೆಲವು ಸಮಯಗಳ ಕಾಲ ವಿವಿಯಲ್ಲಿದ್ದ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡದೆ ಮರಳಿ ಬಂದಿದ್ದಾರೆ ಎನ್ನಲಾಗಿದೆ.
ಆದರೆ, ದೀಪಿಕಾ ಪಡುಕೋಣೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ದೇಶವಿರೋಧಿ ಕೆಲಸ ಆದ್ದರಿಂದ ದೀಪಿಕಾ ಹಾಗೂ ಆಕೆಯ ಪತಿ ರಣವೀರ್ ಸಿಂಗ್ ಅವರ ಸಿನೆಮಾವನ್ನು ಹಾಗೂ ದೀಪಿಕಾ ಅವರ ಮುಂದಿನ ಛಪಾಕ್ ಸಿನಿಮಾವನ್ನು ಬಿಡುಗಡೆಯಾಗಲು ಅವಕಾಶ ನೀಡಬಾರದು ಎಂದು ಹಿಂದೂ ಮಹಾಸಭಾದಿಂದ ಪತ್ರ ಬರೆಯಲಾಗಿದೆ.