ಬೆಂಗಳೂರು, ಡಿ 28(Daijiworld News/PY) : ಇತ್ತೀಚೆಗೆ ಮೀಟೂ ವಿಚಾರದಲ್ಲಿ ಸುದ್ದಿಯಾಗಿದ್ದ ಸಂಜನಾ ಮತ್ತೆ ಹೊಸದೊಂದು ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ.
ಡಿ.24ರಂದು ಪಂಚತಾರಾ ಹೋಟೆಲ್ನಲ್ಲಿ ನಡೆದ ಪಾರ್ಟಿ ಒಂದರಲ್ಲಿ ಸಂಜನಾ-ವಂದನಾ ಪಾಲ್ಗೊಂಡಿದ್ದ ವೇಳೆ ಇವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಆ ವೇಳೆ ಸಂಜನಾ ತಮ್ಮ ಕೈಯಲ್ಲಿದ್ದ ವಿಸ್ಕಿ ಗ್ಲಾಸ್ ಅನ್ನು ನಿರ್ಮಾಪಕಿ ಮೇಲೆ ಎಸೆದು ಅವಾಂತರ ಸೃಷ್ಟಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದು, ದೂರುದಾರರು ಹೆಚ್ಚಿನ ತನಿಖೆಗೆ ನ್ಯಾಯಾಲಯದಲ್ಲಿ ಅನುಮತಿ ಪಡೆದರೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದರು.
ಗಲಾಟೆಯ ಬಗ್ಗೆ ಮಾತನಾಡಿದ ಸಂಜನಾ, "ವಂದನಾ ಜೈನ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನ್ನ ಕೈ ತಿರುವಿ ಮೊಬೈಲ್ ಕಸಿದುಕೊಂಡಿದ್ದಾರೆ, ನನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ, ಹೀಗೆ ಮಾತನಾಡಿದರೂ ನಾನ್ಯಾಕೆ ಸುಮ್ಮನಿರಬೇಕು, ವಂದನಾ ನನ್ನ ಬಳಿಬಂದು ಕ್ಷಮೆಯಾಚಿಸಲಿ ಇಲ್ಲದಿದ್ದರೆ ಅವರ ವಿರುದ್ದ ನಾನು ದೂರು ದಾಖಲಿಸುತ್ತೇನೆ" ಎಂದು ತಿಳಿಸಿದ್ದಾರೆ.
ಡಿ.24ರಂದು ನಡೆದ ಗಲಾಟೆಯನ್ನು ನನ್ನ ಅಣ್ಣ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ, ಆ ಸಾಕ್ಷ್ಯ ನನ್ನಲ್ಲಿದೆ, ಯಾವುದೇ ಕಾರಣಕ್ಕೂ ನಾನು ಅದನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಸಂಜನಾ ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಈ ಬಗ್ಗೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಬಗ್ಗೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ವಂದನಾ, "ನಾನು ಘಟನೆಯ ವಿಚಾರವಾಗಿ ಮಾತನಾಡುವುದಿಲ್ಲ, ಸಂಜನಾ ನನ್ನ ವಿರುದ್ದ ದೂರು ದಾಖಲಿಸಲಿ, ದೂರು ದಾಖಲಿಸಬೇಕೆಂದಿದ್ದರೆ ಗಲಾಟೆ ನಡೆದ ವೇಳೆಯೇ ದೂರು ನೀಡಬೇಕಾಗಿತ್ತು, ನಾನು ದೂರು ನೀಡಿದ್ದೇನೆ ಎಂದು ಆಕೆಯೂ ದೂರು ನೀಡಿದ್ದಾಳೆ, ಹಲ್ಲೆ ಮಾಡಿದ್ದು ಅವಳು ನಾನಲ್ಲ, ಯಾವುದೇ ಕಾರಣಕ್ಕೂ ನಾನು ಈ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ" ಎಂದು ತಿಳಿಸಿದ್ದಾರೆ.