ಮಂಗಳೂರು, ಡಿ 28 (Daijiworld News/MSP): ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ಅವರ ನಿರ್ದೇಶನ ಬಹು ನಿರೀಕ್ಷಿತ ಚಿತ್ರ "ಪ್ರವೇಶ" ಮುನ್ನ "ವರ್ಣಪಟಲ" ತೆರೆಗೆ ಬರಲಿದೆ.
ಸೆ. 3 ರಂದು ಮಹೂರ್ತ ಕಂಡ ವರ್ಣಪಟಲ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಇದೀಗ ಚಿತ್ರತಂಡ ಎಡಿಟಿಂಗ್ ಕೆಲಸ ಕೈಗೆತ್ತಿಕೊಂಡಿದ್ದು, ಮುಂದಿನ ವಾರದಿಂದ ಡಬ್ಭಿಂಗ್ ಕೆಲಸಕ್ಕೆ ಚಾಲನೆ ದೊರಕಲಿದೆ.
" ವರ್ಣಪಟಲ " ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ, ತಾಯಿ ಮಗುವಿನ ಬಾಂಧವ್ಯ ಮತ್ತು ಮಕ್ಕಳನ್ನು ಕಾಡುವ ಆಟಿಸಂ ಖಾಯಿಲೆ ಕುರಿತ ಕಥಾವಸ್ತುವನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಖ್ಯಾತ ನಟಿ ಸುಹಾಸಿನಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಪ್ರಯತ್ನದಲ್ಲಿದ್ದೇವೆ. ಆ ಬಳಿಕ "ಪ್ರವೇಶ" ಚಿತ್ರದ ಪ್ರವೇಶವಾಗಲಿದೆ" ಎನ್ನುತ್ತಾರೆ ಚೇತನ್ ಮುಂಡಾಡಿ
ವರ್ಣಪಟಲ ಚಿತ್ರಕ್ಕಾಗಿ ಕರಾವಳಿ ಪ್ರದೇಶಗಳಾದ ಮಡಂತ್ಯಾರು, ಮಂಗಳೂರು ಸೇರಿ ಮಡಿಕೇರಿ, ಬೆಂಗಳೂರು ಶೂಟಿಂಗ್ ನಡೆದಿತ್ತು. ಚಿತ್ರದ ನಾಯಕ ನಟನಾಗಿ ಅನೂಪ್ ಸಾಗರ್, ನಾಯಕಿಯಾಗಿ ಜೋಗುಳ ಧಾರವಾಹಿಯ ಜ್ಯೋತಿ ರೈ, ಆಟಿಸಂ ಪೀಡಿತ ಮಗುವಾಗಿ ಚಲನಚಿತ್ರ ರಂಗಕ್ಕೆ ಹೊಸ ಪರಿಚಯ ಧನಿಕ ಹೆಗ್ಡೆ , ಚೇತನ್ ರೈ ಮಾಣಿ, ಇಳಾ ವಿಟ್ಲಾ , ರಂಗಿತರಂಗ ಚಲನಚಿತ್ರ ಕಲಾವಿದ ಅರವಿಂದ್ ರಾವ್ ಮತ್ತು ಕಿರುತೆರೆ ಕಲಾವಿದ ಶ್ರೀಕಾಂತ್ ಹೆಬ್ಲಿಕರ್ ಹಲವು ಕಿರುತೆರೆ ಕಲಾವಿದರು ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಚಿತ್ರದ ಕತೆ ಮತ್ತು ನಿರ್ಮಾಣ ಡಾ. ಸರಸ್ವತಿ ಹೊಸದುರ್ಗ ಹಾಗೂ ಕವಿತಾ ಸಂತೋಷ್ ಇವರದ್ದಾಗಿದೆ. ಚಿತ್ರಕ್ಕೆ ಎ.ಪಿ ಅರ್ಜುನ್ - ಸಾಹಿತ್ಯವಿದ್ದು , ಸಂಭಾಷಣೆಕಾರರಾಗಿ ವಿನೂ ಬಳಂಜ, ಸಂಗೀತ - ಹೊಸ ಪ್ರತಿಭೆ ಹರ್ಷವರ್ಧನ ಅವರದ್ದಾಗಿದ್ದು ಛಾಯಾಗ್ರಹಕರಾಗಿ ಗಣೇಶ್ ಹೆಗ್ಡೆ ದುಡಿದಿದ್ದಾರೆ.