ನವದೆಹಲಿ, ಡಿ 23 (Daijiworld News/MB) : 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಕನ್ನಡ ಸಿನಿಮಾರಂಗ 11 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು 'ನಾತಿಚರಾಮಿ' ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಈ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಲಿದ್ದು ಸಮಾರಂಭದಲ್ಲಿ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಪ್ರದಾಯದಂತೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಬೇಕು. ಆದರೆ ಈ ಬಾರಿ ಕೋವಿಂದ್ ಅವರ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿ ನಾಯ್ಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಭಾರತೀಯ ಸಿನಿಮಾರಂಗದ ಪರಮೋಚ್ಛ ಪ್ರಶಸ್ತಿಯಾದ 50ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ದೊರೆಯಲಿದೆ.
ಕನ್ನಡದ 'ನಾತಿಚರಾಮಿ'ಯು ಅತ್ಯುತ್ತಮ ಸಿನಿಮಾ, ಉತ್ತಮ ಸಂಕಲನ, ಉತ್ತಮ ಸಾಹಿತ್ಯ, ಉತ್ತಮ ಗಾಯಕಿ (ಬಿಂದು ಮಾಲಿನಿ) ಹಾಗೂ ಶ್ರುತಿ ಹರಿಹರನ್ ಗೆ ವಿಶೇಷ ಜ್ಯೂರಿ ಪ್ರಶಸ್ತಿ ಸೇರಿದಂತೆ ಒಟ್ಟು ೫ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
'ಒಂದಲ್ಲಾ ಎರಡಲ್ಲಾ' ಸಿನಿಮಾಕ್ಕೆ ನರ್ಗಿಸ್ ದತ್ ಪ್ರಶಸ್ತಿ ದೊರೆತಿದ್ದು ಈ ಸಿನಿಮಾದ ಬಾಲ ನಟ ಪಿವಿ ರೋಹಿತ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ವಿಜೇತರಾಗಿದ್ದಾರೆ. 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ಸ್ವರ್ಣ ಕಮಲ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
'ಕೆಜಿಎಫ್ ಚಾಪ್ಟರ್ 1' ಅತ್ಯುತ್ತಮ ಸಾಹಸ ಹಾಗೂ ಸ್ಪೆಷಲ್ ಎಫೆಕ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. 'ಸರಳ ವಿರಳ' ಸಾಕ್ಷ್ಯ ಚಿತ್ರ ಅತ್ಯುತ್ತಮ ಶೈಕ್ಷಣಿಕ ಸಿನಿಮಾ ಪ್ರಶಸ್ತಿ ಪಡೆದಿದೆ.
'ಉರಿ ದ ಸರ್ಜಿಕಲ್ ಸ್ಟ್ರೈಕ್' ಸಿನಿಮಾದ ವಿಕಿ ಕೌಶಲ್ ಹಾಗೂ ಅಂಧಾಧುನ್ ಸಿನಿಮಾದ ಆಯುಷ್ಮಾನ್ ಖುರಾನಾ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ್ದು 'ಮಹಾನಟಿ' ತೆಲುಗು ಸಿನಿಮಾದ ನಟಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮರಾಠಿಯ 'ಪಾನಿ' ಅತ್ಯುತ್ತಮ ಪರಿಸರ ಪ್ರಶಸ್ತಿ ಪಡೆದಿದೆ.