ಮಂಗಳೂರು, ಡಿ 21 (Daijiworld News/PY) : ಕೋಸ್ಟಲ್ ವುಡ್ ನಲ್ಲಿ ಕಡಂದಲೆ ಸುರೇಶ್ ಭಂಡಾರಿ ಅರ್ಪಿಸುವ ಬಾಕೂರು ಸತೀಶ್ ಪೂಜಾರಿ ನಿರ್ಮಾಣದ "ಗಬ್ಬರ್ ಸಿಂಗ್" ಇದೀಗ ಸದ್ದು ಮಾಡಲು ಮುಂದಾಗಿದ್ದು ಸಿನಿಮಾದ ಮುಹೂರ್ತವು ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯಿತು.
ಸಿನಿಮಾದ ಮುಹೂರ್ತದಲ್ಲಿ ತುಳು ನಾಟಕ ಕಲಾವಿದರ ಒಕ್ಕೂಟ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಕ್ಲ್ಯಾಪ್ ಮಾಡಿದರು. ಉದ್ಯಮಿ ಚಂದ್ರಶೇಖರ್ ನಾನಿಲ್ ಕ್ಯಾಮರಾಗೆ ಚಾಲನೆ ನೀಡಿದರು. ಸಿನಿಮಾದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಲಿದ್ದು, ತುಳು ಸಿನೆಮಾದ ರಂಗದ ದಿಗ್ಗಜರನ್ನು ಒಳಗೊಂಡಂತೆ ಕನ್ನಡ ಸಿನಿಮಾಕ್ಕೆ ಸರಿಸಮಾನವಾಗಿ ಚಿತ್ರ ನಿರ್ಮಿಸಲಿದ್ದೇವೆ, ಸಿನಿಮಾವು ಹಾಸ್ಯದ ಜೊತೆ ಉತ್ತಮವಾದ ಕತೆಗಳನ್ನೂ ಒಳಗೊಂಡಿದೆ ಎಂದು ನಿರ್ಮಾಪಕರು ಹಾಗೂ ನಿರ್ದೇಶಕರು ತಿಳಿಸಿದ್ದಾರೆ.
ಮುಖ್ಯ ಪಾತ್ರದಲ್ಲಿ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸತೀಶ್ ಬಂದಲೆ, ಗಿರೀಶ್ ಎಂ ಶೆಟ್ಟಿ ಕಟೀಲು, ಪ್ರಜ್ವಲ್ ಪ್ರಕಾಶ್, ಶಶಿ ಬೆಳ್ಳಾಯರು, ನರೇಶ್ ಕುಮಾರ್ ಸಸಿಹಿತ್ಲು, ನರೇಂದ್ರ ಕೆರೆಕಾಡು, ಉದಯ ಆಳ್ವ ಸುರತ್ಕಲ್, ಸುನೀಲ್ ಕೃಷ್ಣಾಪುರ, ಯಶವಂತ ಶೆಟ್ಟಿ ಕೃಷ್ಣಾಪುರ, ಚಂದ್ರಹಾಸ ಶೆಟ್ಟಿ ಮಾಣಿ, ಮೋಹನ್ ಕೊಪ್ಪಳ, ಶೇಖರಿ ಭಂಡಾರಿ ಕಾರ್ಕಳ ಮುಂತಾದ ಕಲಾವಿದರು ಅಭಿನಯಿಸಲಿದ್ದಾರೆ.