ಮಂಗಳೂರು, ಡಿ 12 (Daijiworld News/MB) : ಬಾಲಿವುಡ್ನ ಶೋಲೆ ಸಿನಿಮಾದ "ಗಬ್ಬರ್ಸಿಂಗ್" ಈಗ ಕೋಸ್ಟಲ್ವುಡ್ನಲ್ಲೂ ಸದ್ದು ಮಾಡಿದೆ. ಹೌದು ವಿಶಿಷ್ಟ ಟೈಟಲ್ಗಳ ಮೂಲಕ ಸದ್ದು ಮಾಡುತ್ತಿರುವ ಕೋಸ್ಟಲ್ ವುಡ್ನಲ್ಲಿ ಈಗ ಗಬ್ಬರ್ ಸಿಂಗ್ ಎಂಬ ಸಿನಿಮಾ ತೆರೆ ಕಾಣಲಿದ್ದು ಆ ಸಿನಿಮಾದ ಶೂಟಿಂಗ್ ಕೆಲವೇ ದಿನಗಳಲ್ಲಿ ಆಂಭವಾಗಲಿದೆ.
ಮುತ್ತು ಗೋಪಾಲ ಫಿಲಂಸ್ ಅವರ ಕಡಂದಲೆ ಸುರೇಶ್ ಭಂಡಾರಿ ಅರ್ಪಿಸುವ ಬಾರ್ಕೂರು ಸತೀಶ್ ಪೂಜಾರಿ ನಿರ್ಮಾಣದ ಈ ಸಿನಿಮಾದ ಮುಹೂರ್ತ ಭಾನುವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ ಆಗಲಿದ್ದು ಚಿತ್ರೀಕರಣ ಮಂಗಳೂರು, ಸುರತ್ಕಲ್ ಸುತ್ತಮುತ್ತ ಒಂದೇ ಹಂತದಲ್ಲಿ ನಡೆಯಲಿದೆ.
ಅಂಬರ್ ಕ್ಯಾಟರರ್ಸ್ ಎಂಬ ತುಳು ಸಿನಿಮಾದ ಮೂಲಕ ಕೋಸ್ಟಲ್ವುಡ್ಗೆ ಎಂಟ್ರಿ ಪಡೆದಿದ್ದ ಉದ್ಯಮಿ ಕಡಂದಲೆ ಸುರೇಶ್ ಅವರ ಪುತ್ರ ಸೌರಭ್ ಭಂಡಾರಿ ಈ ಸಿನಿಮಾವನ್ನು ಮಾಡಲು ತಯಾರಾಗಿದ್ದು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅವರೇ ಬಣ್ಣ ಹಚ್ಚಲಿದ್ದಾರೆ.
ಸಿನಿಮಾದ ನಿರ್ದೇಶನ, ಚಿತ್ರಕತೆ, ಹಾಗೂ ಕತೆ ಪ್ರದೀಪ್ ಬೈಕಾಡಿ ಅವರದ್ದಾಗಿದ್ದು ಸಹ ನಿರ್ದೇಶಕರಾಗಿ ರೀಶನ್ ಮೈಸೂರು ಜೊತೆಗೂಡಿದ್ದಾರೆ. ಹಾಗೆಯೇ ಮಧು ಸುರತ್ಕಲ್ ಸಂಭಾಷಣೆ ಬರೆದಿದ್ದಾರೆ.
ನವ್ಯ ಪೂಜಾರಿ ಹಾಗೂ ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಪ್ರಸನ್ನ ಶೆಟ್ಟಿ ಬೈಲೂರು, ಪ್ರಜ್ವಲ್, ಉಮೇಶ್ ಮಿಜಾರ್, ಗಿರೀಶ್ ಶೆಟ್ಟಿ ಕಟೀಲ್, ಸತೀಶ್ ಬಂದಲೆ, ಶಶಿ ಬೆಳ್ಳಾಯಾರು, ನರೇಶ್ ಕುಮಾರ್ ಸಸಿಹಿತ್ಲು, ಸುನಿಲ್ ಕೃಷ್ಣಾಪುರ, ಯಶವಂತ ಶೆಟ್ಟಿ ಕೃಷ್ಣಾಪುರ, ಉದಯ ಆಳ್ವ ಸುರತ್ಕಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಸಿನಿಮಾಕ್ಕೆ ಸಂಗೀತವನ್ನು ಡೋಲ್ಫಿನ್ ನೀಡಲಿದ್ದು ನರೇಶ್ ಕುಮಾರ್ ಸಸಿಹಿತ್ಲು, ಆರ್ ಎನ್ ಶೆಟ್ಟಿ ಕಳವಾರು ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣವನ್ನು ರವಿ ಸುವರ್ಣ, ಸಂಕಲನವನ್ನು ಹರೀಶ್ ಕೊಟ್ಟಾಡಿ ಮಾಡಲಿದ್ದಾರೆ.