ಮುಂಬೈ, ಡಿ 10 (Daijiworld News/MB) : ದೀಪಿಕಾ ಪಡುಕೋಣೆ ನಟನೆಯ ಬಾಲಿವುಡ್ ಸಿನಿಮಾ "ಚಾಪಕ್" 2020ರ ಜನವರಿ 10ರಂದು ತೆರೆ ಕಾಣಲಿದೆ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾದ ನಂತರ ಸಿನಿಮಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಯೇ ದೀಪಿಕಾ ಅವರ ನಟನೆಗೂ ಜನರು ಫಿದಾ ಆಗಿದ್ದಾರೆ.
ದೀಪಿಕಾ ಪಡುಕೋಣೆ ವಿವಾಹವಾದ ಬಳಿಕ ನಟಿಸುವ ಮೊದಲ ಸಿನಿಮಾ ಇದಾಗಿದ್ದು ಈ ಸಿನಿಮಾದಲ್ಲಿ ಆಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಎಲ್ಲಾ ಸಿನಿಮಾಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡುವ ದೀಪಿಕಾ ಪಡುಕೋಣೆ ಈ ಬಾರಿ ನೈಜ್ಯ ಕಥೆಯಾಧಾರಿತ ಸಿನಿಮಾದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಅಲೋಕ್ ದೀಕ್ಷಿತ್ ಪಾತ್ರದಲ್ಲಿ ವಿಕ್ರಾಂತ್ ಮ್ಯಾಸ್ಸೆ ಅವರು ಕಾಣಿಸಿಕೊಂಡಿದ್ದಾರೆ.
2005 ರಲ್ಲಿ ಲಕ್ಷ್ಮೀ ಅಗರ್ವಾಲ್ ಎಂಬ ಯುವತಿ ಮೇಲೆ ವಿಕೃತ ಮನಸ್ಸಿನ ಯುವಕನೊಬ್ಬ ಆಸಿಡ್ ದಾಳಿ ನಡೆಸಿದ್ದ. ಲಕ್ಷ್ಮೀ ಅನೇಕ ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡರು ಕಲೆ ಹಾಗೆ ಮುಖದ ಮೇಲೆ ಉಳಿದಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿದ ಲಕ್ಷ್ಮೀ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ಥರಿಗೆ ಸಹಾಯ ಮಾಡುವ ಕಾರ್ಯಕ್ಕೆ ಮುಂದಾಗುತ್ತಾಳೆ. ಈ ನೈಜ್ಯ ಘಟನೆಯನ್ನು ಸಿನಿಮಾ ಮಾಡಲಾಗಿದ್ದು ಆಸಿಡ್ ದಾಳಿಗೆ ಒಳಗಾದ ಯುವತಿಯ ಹೆಸರನ್ನು ಮಾಲತಿ ಎಂದು ಬದಲಿಸಲಾಗಿದೆ.
ಈ ಸಿನಿಮಾದ ನಿರ್ದೇಶನವನ್ನು ಮೇಘನಾ ಗುಲ್ಜಾರ್ ಅವರು ಮಾಡಿದ್ದು, ಲೀನಾ ಯಾದವ್ ನಿರ್ಮಾಣ ಮಾಡಿದ್ದಾರೆ. ಶಂಕರ್, ಎಹಸಾನ್ ಹಾಗೂ ಲಾಯ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ.