ಮಂಗಳೂರು, ಡಿ 06 (Daijiworld News/MB) : ದಿವಂಗತ ಹ್ಯಾರಿಸ್ ಕೊನಾಜೆಕಲ್ಲು ಹಾಗೂ ಪ್ರಶಾಂತ್ ವೈಭವ್ ನಿರ್ದೇಶಿಸಿರುವ ತುಳು ಸಿನಿಮಾ 'ಆಟಿಡೊಂಜಿ ದಿನ' ಅದ್ದೂರಿಯಾಗಿ ಜ್ಯೋತಿ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.
ಭವಿಷ್ ಆರ್ಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾವನ್ನು ಬೆಂಗಳೂರು ಮೂಲದ ಉದ್ಯಮಿ ರಾಧಾಕೃಷ್ಣ ನಾಗರಾಜ್ ಹಾಗೂ ಚಿತ್ರಾ ರಾಧಕೃಷ್ಣ ನಿರ್ಮಿಸಿದ್ದು ,ಸಿನಿಮಾವು ಮಂಗಳೂರು, ಉಡುಪಿ ಸುರತ್ಕಲ್ ನ ಒಟ್ಟು 14 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.
ಸಿನೆಮಾದ ನಿರ್ದೇಶಕರಾಗಿದ್ದ ಹ್ಯಾರಿಸ್ ಕೊನಾಜೆಕಲ್ಲು ಅಪಘಾತದಲ್ಲಿ ಮೃತ ಪಟ್ಟ ನಂತರ ದಗಲ್ ಬಾಜಿಲು ಸಿನಿಮಾ ಖ್ಯಾತಿಯ ವೈಭವ್ ಪ್ರಶಾಂತ್ ಈ ಸಿನೆಮಾ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತರು. ಆಕಾಶ್ ಹಾಸನ್ ಸಹ ನಿರ್ದೇಶಕರಾಗಿದ್ದಾರೆ.
ಪಟ್ಲಾ ಸತೀಶ್ ಶೆಟ್ಟಿ ಧ್ವನಿಯಲ್ಲಿ "ಆಟಿಡೊಂಜಿ ದಿನ" ಟೈಟಲ್ ಹಾಡು ಮೂಡಿಬಂದಿದ್ದು ಒಟ್ಟು ಸಿನಿಮಾದಲ್ಲಿ 4 ಹಾಡುಗಳಿವೆ. ರಾಜೇಶ್ ಭಟ್ ಮೂಡಬಿದ್ರೆ ಮತ್ತು ಎಸ್.ಪಿ. ಚಂದ್ರಕಾಂತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಸಿನೆಮಾದ ಛಾಯಾಗ್ರಹಣ ನರೇನ್ ಜಿ ಮಾಡಿದ್ದಾರೆ.
ನಿರೀಕ್ಷ ಶೆಟ್ಟಿ ಹಾಗೂ ಪೃಥ್ವಿ ಅಂಬರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಶ್ರದ್ಧಾ ಸಾಲಿಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ವಿಶ್ವನಾಥ್ ಮೂಡುಬಿದಿರೆ, ದೀಪಕ್ ರೈ ಪನಾಜೆ, ಸತೀಶ್ ಬಂದಲೆ, ಸೂರಜ್ ಸಾಲ್ಯಾನ್, ವಾಸು ಮಲ್ಪೆ ಮೊದಲಾದವರು ಈ ಸಿನೆಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.