ಮುಂಬೈ, ಡಿ 02 (Daijiworld News/MSP): ಪ್ರಭುದೇವಾ ಆ್ಯಕ್ಷನ್ ಕಟ್ ಹೇಳಿರುವ ಸಲ್ಮಾನ್ ಖಾನ್ ಹಾಗೂ ಕನ್ನಡದ ಪೈಲ್ವಾನ್ ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ದಬಾಂಗ್ 3' ಇದೇ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ. ಆದರೆ ಚಿತ್ರ ಬಿಡುಗಡೆಗೂ ಮುನ್ನವೇ 'ದಬಾಂಗ್ 3' ವಿವಾದಕ್ಕೀಡಾಗಿದೆ. ಹೌದು, ಚಿತ್ರದ ಟೈಟಲ್ ಟ್ರ್ಯಾಕ್ 'ಹುಡ್ ಹುಡ್ ದಬಾಂಗ್...' ಸಾಂಗ್ನಲ್ಲಿ ಹಿಂದೂ ಧರ್ಮದ ದೇವತೆಗಳನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
‘ದಬಾಂಗ್ - 3’ ಚಲನಚಿತ್ರ 'ವ್ಯಕ್ತಿ ಸ್ವಾತಂತ್ರ್ಯ' ಹಾಗೂ 'ಕಲಾಸ್ವಾತಂತ್ರ್ಯ'ದ ಹೆಸರಿನಲ್ಲಿ ಒಂದು ಸಮುದಾಯಕ್ಕೆ ನೋವುಂಟು ಮಾಡಿದ್ದು ಇದರ ವಿರುದ್ದ ಪುಣೆಯಲ್ಲಿ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿತ್ರದಲ್ಲಿ ಹಿಂದೂ ಸಾಧುಗಳನ್ನು ಹಾಗೂ ಭಗವಂತನನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಚಿತ್ರದಲ್ಲಿ ಹಲವು ದೃಶ್ಯಗಳು ಅತ್ಯಂತ ಖೇದಕರವಾಗಿದ್ದು ಹಿಂದೂಗಳ ಶ್ರದ್ಧಾಸ್ಥಾನದ ಅವಮಾನ ಮಾಡುವಂತಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎನ್ನುವುದು ಹಿಂದೂ ಜನಜಾಗೃತಿ ಒತ್ತಾಯ.
ದಬಾಂಗ್ ಚಿತ್ರದ ವಿರುದ್ಧ ‘ಕಲಂ 295 ಅ’ಗನುಸಾರ ಧಾರ್ಮಿಕಭಾವನೆಯನ್ನು ಘಾಸಿಗೊಳಿಸಿದ ಪ್ರಕರಣದಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದೇವೆ. ಒಂದುವೇಳೆ ನಿರ್ಮಾಪಕರು ಅಥವಾ ಸೆನ್ಸರ್ ಬೋರ್ಡ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದೃಶ್ಯವನ್ನು ತೆಗೆಯದಿದ್ದಲ್ಲಿ, ಹಿಂದೂ ಸಮಾಜವು ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ಪರಾಗ ಗೋಖಲೆಯವರು ಈ ಸಮಯದಲ್ಲಿ ಎಚ್ಚರಿಕೆಯನ್ನು ನೀಡಿದರು.
ಚಲನಚಿತ್ರದ ಮಾಧ್ಯಮದಿಂದ ಯಾರ ಧಾರ್ಮಿಕ ಭಾವನೆಯೂ ನೋಯಸದಂತಿರಲಿ, ಎಂಬುದು ನಮ್ಮ ನಿಲುವಾಗಿದೆ. ಹೀಗಾಗಿ ಧಾರ್ಮಿಕ ಭಾವನೆಯನ್ನು ನೋಯಿಸುವ ಚಿತ್ರವನ್ನು ನಿರ್ಮಿಸದಿರಲಿ, ಅದಕ್ಕಾಗಿ ಕಾನೂನನ್ನು ನಿರ್ಮಿಸುವುದು, ಅದೇರೀತಿ ಸೆನ್ಸರ್ ಬೋರ್ಡನಲ್ಲಿಯೂ ಧಾರ್ಮಿಕ ಕ್ಷೇತ್ರದಲ್ಲಿಯ ತಜ್ಞ ವ್ಯಕ್ತಿಯನ್ನು ನೇಮಿಸುವುದು ಆವಶ್ಯಕವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.