ಮುಂಬೈ, ನ 26 (Daijiworld News/MB) : ನಟಿ ಕಂಗನಾ ‘ತಲೈವಿ’ ಸಿನೆಮಾದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕಾಗಿ ಮಾತ್ರೆಗಳನ್ನು ಸೇವಿಸಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿರುವುದಾಗ ಹೇಳಿದ್ದಾರೆ.
ಕಾಲಿವುಡ್ ಮತ್ತು ಬಾಲಿವುಡ್ನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ರವರ ಜೀವನಚರಿತ್ರೆ ಕುರಿತು ಎರಡು ಸಿನಿಮಾಗಳು ತಯಾರಾಗುತ್ತಿದ್ದು ಬಾಲಿವುಡ್ನಲ್ಲಿ ಜಯಲಲಿತಾ ಆಗಿ ನಟಿ ಕಂಗನಾ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ಆರು ಕೆ.ಜಿ.ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ.
‘ತಲೈವಿ’ ಚಿತ್ರದ ಫಸ್ಟ್ಲುಕ್ ಟೀಸರ್ ಬಿಡುಗಡೆಯಾಗಿದ್ದು, ನಟಿ ಕಂಗನಾ ‘ತಲೈವಿ’ ಚಿತ್ರಕ್ಕಾಗಿ ತಾವು ಮಾಡಿಕೊಂಡಿರುವ ತಯಾರಿ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸಿನೆಮಾದಲ್ಲಿ ಜಯಲಲಿತಾ ಅವರಂತೆ ಕಾಣಲು ನಾನು ತುಂಬಾ ಕಷ್ಟ ಪಟ್ಟಿದ್ದು ಅದಕ್ಕಾಗಿ ಆರು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದೇನೆ.ನಾನು ಎತ್ತರ ಮತ್ತು ಸಣ್ಣ ಇರುವುದರಿಂದ ನನ್ನ ಮುಖವು ದುಂಡಾಗಿರಲಿಲ್ಲ. ಹೀಗಾಗಿ ಅತೀ ಹೆಚ್ಚಿನ ಆಹಾರವನ್ನು ಸೇವನೆ ಮಾಡುತ್ತಿದ್ದೆ. ಆದರೆ ಜಯಲಲಿತಾ ಅವರು ಮುಖ ದುಂಡಗಿತ್ತು. ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಯಿತು. ಅದರಲ್ಲೂ ಸೊಂಟ ಮತ್ತು ತೊಡೆ ಭಾಗದಲ್ಲಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಹಾರ್ಮೋನ್ ಮಾತ್ರೆಗಳನ್ನು ಸೇವಿಸಿದ್ದೇನೆ ಎಂದು ಹೇಳಿದ್ದಾರೆ.
"ಸಾಮಾನ್ಯವಾಗಿ ನಟರು ಸಿನಿಮಾಗಾಗಿ ತಮ್ಮ ಸ್ಟೈಲ್ ಬದಲಾವಣೆ ಮಾಡುತ್ತಾರೆ. ಆದರೆ ದೇಹದ ತೂಕವನ್ನು ಯಾರದರೂ ಹೆಚ್ಚಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಜಯಲಲಿತಾ ಅವರನ್ನು ಹೋಲುವಂತೆ ನಾನು ಆಗಬೇಕೆಂದು ನಿರ್ದೇಶಕರಾದ ವಿಜಯ್ ಅವರು ಅಂದುಕೊಂಡಿದ್ದರು. ದೈಹಿಕವಾಗಿ ಜಯಲಲಿತಾ ಅವರು ದಪ್ಪವಾಗಿದ್ದರು. ಮೇಕಪ್ ಮೂಲಕ ನನ್ನ ಮುಖ ದಪ್ಪ ಕಾಣಲು ಸಾಧ್ಯವಾಯಿತು. ಜಯಲಲಿತಾ ಅವರಂತೆ ಕಾಣಲು ದೇಹದ ಹಲವೆಡೆ ಪ್ಯಾಡ್ಗಳನ್ನು ಬಳಕೆ ಮಾಡಿದ್ದೇವೆ" ಎಂದರು.
ಟೀಸರ್ ನಲ್ಲಿ ಹಸಿರು ಸೀರೆ ಮತ್ತು ಹಸಿರು ಮೇಲಂಗಿ ತೊಟ್ಟು ಕಂಗನಾ ರನೌತ್ ಗೆಲುವಿನ ಸಂಕೇತವನ್ನು ತೋರಿಸುತ್ತಿದ್ದಾರೆ. ಕಂಗನಾ ಅವರು ಫಸ್ಟ್ಲುಕ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಕಂಗನಾ ನೋಟವನ್ನು ಇಷ್ಟಪಟ್ಟರೆ ಇನ್ನು ಕೆಲವರು ಜಯಲಲಿತಾ ಅವರಿಗೂ ಕಂಗನಾ ರನೌತ್ ಪಾತ್ರಕ್ಕೂ ಹೋಲಿಕೆಯಾಗುವುದೇ ಇಲ್ಲ. ಆನಿಮೇಟೆಡ್ ಬೊಂಬೆ ತರಹ ಇದೆ ಎಂದು ಪ್ರತಿಕ್ರಿಯೆ ಮಾಡಿದ್ದಾರೆ.
ವಿಷ್ಣುವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣ ಮಾಡಿರುವ ‘ತಲೈವಿ’ ಸಿನಿಮಾವನ್ನು ಎ.ಎಲ್ ವಿಜಯ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಮುಂದಿನ ವರ್ಷ ಬಿಡುಗಡೆಯಾಗಲಿದೆ.