ಬೆಂಗಳೂರು, ನ 17 (Daijiworld News/MB): ತನ್ನ ಡಿಸಿಪಿ ಹುದ್ದೆಗೆ ರಾಜಿನಾಮೆ ನೀಡಿ ಸಮಾಜ ಸೇವೆಯಲ್ಲಿ ನಿರತರಾದ ಕಾರ್ಯ ದಕ್ಷತೆಯಿಂದ ಜನಮನ ಗೆದ್ದ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಸಿನೆಮಾ ಮೂಲಕ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು ಕೇವಲ ಒಂದು ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ರಾಜ್ ಕುಮಾರ್ ನಿರ್ದೇಶನದ ಅರಬ್ಬೀ ಸಿನೆಮಾದಲ್ಲಿ ಅಣ್ಣಾಮಲೈ ನಟಿಸಲಿದ್ದು, ಇದು ಬೆಂಗಳೂರು ಮೂಲದ ಕೈಗಳಿಲ್ಲದ ಪ್ಯಾರಾ ಈಜುಪಟು ಕೆ.ಎಸ್.ವಿಶ್ವಾಸ್ ಅವರ ಬದುಕು ಮತ್ತು ಸಾಧನೆಯ ಕುರಿತ ಸಿನೆಮಾ ಇದಾಗಿದೆ.
ಈ ಸಿನೆಮಾದಲ್ಲಿ ನಾಯಕನಾಗಿ ಸ್ವತಹ ವಿಶ್ವಾಸ್ ಅವರೇ ನಟಿಸಲಿದ್ದು ಅಣ್ಣಾಮಲೈ ಸ್ವಿಮಿಂಗ್ ಕೋಚ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ನವೆಂಬರ್ ೧೬ರ ಶನಿವಾರ ಅರಬ್ಬೀ ಸಿನೆಮಾದ ಆಡಿಯೋ ಬಿಡುಗಡೆ ಸಮಾರಂಭ ಪುತ್ತೂರಿನ ವಿವೇಕಾನಂದ ಪಿ.ಯು.ಕಾಲೇಜಿನಲ್ಲಿ ನಡೆದಿದ್ದು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಣ್ಣಾಮಲೈ ಅವರನ್ನು ಚಿತ್ರ ತಂಡ ಕೋಚ್ ಪಾತ್ರದಲ್ಲಿ ನಟಿಸುವಂತೆ ಕೋರಿದೆ. ಆ ಕೂಡಲೇ ತಾವು ನಟಿಸುವುದಾಗಿ ಖಚಿತ ಪಡಿಸಿರುವ ಅಣ್ಣಾಮಲೈ 'ಈ ಸಿನೆಮಾ ಪ್ಯಾರಾ ಈಜು ಪಟುವಿನ ಕುರಿತದ್ದಾಗಿರುವುದರಿಂದ ನಟಿಸಲು ಒಪ್ಪಿಗೆ ನೀಡಿರುವೆ. ವಿಕಲ ಚೇತನ ವ್ಯಕ್ತಿಯ ಜೀವನದ ಕುರಿತು ಇರುವ ಈ ಸಿನೆಮಾದಲ್ಲಿ ನಟಿಸುವುದರ ಮೂಲಕ ಸಮಾಜಕ್ಕೆ ಪ್ರೇರಣೆ ಆಗಬೇಕೆಂದು ಬಯಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮಾತಾನಾಡಿದ ನಿರ್ದೇಶಕ 'ಅಣ್ಣಾಮಲೈ ಅವರನನ್ನು ನಮ್ಮ ಸಿನೆಮಾದಲ್ಲಿ ಬಣ್ಣ ಹಚ್ಚಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಅವರು ವಿದೇಶದಲ್ಲಿ ಇದ್ದ ಕಾರಣ ಅವರಲ್ಲಿ ಈ ಕುರಿತು ಮಾತನಾಡಿರಲಿಲ್ಲ. ಪುತ್ತೂರಿನ ಕಾರ್ಯಕ್ರಮದಲ್ಲಿ ಅವರಿಗೆ ಚಿತ್ರಕತೆ ಹೇಳಿದಾಗ ಅವರು ಒಪ್ಪಿದ್ದಾರೆ' ಎಂದು ಹೇಳಿದ್ದಾರೆ.