ಬೆಂಗಳೂರು, ನ 11 (Daijiworld News/MB): ಕಣ್ಣು ಮಿಟಿಕಿಸಿ ದಿನ ಬೆಳಗಾಗುವುದರಲ್ಲಿ ಸೆಲೆಬ್ರೆಟಿಯಾದ ಯುವಕರ ಮನ ಗೆದ್ದ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆ ವೇದಿಕೆ ಹಂಚಿಕೊಂಡ ನಟ ಜಗ್ಗೇಶ್ ಅಸಮಾಧಾನ ವ್ಯಕ್ತ ಪಡಿಸಿ ಪೋಸ್ಟ್ ಮಾಡಿದ್ದಾರೆ.
ನೂರು ಸಿನಿಮಾ ನಿರ್ದೇಶಕ ಸಾಯಿಪ್ರಕಾಶ್, ವಿದ್ಯಾದಾನಿ ಶ್ರೀ ನಿರ್ಮಲಾನಂದ ಶ್ರೀಗಳು ಇರುವ ಕಾರ್ಯಕ್ರಮಕ್ಕೆ ಬೇರೆ ಅನೇಕ ಸಾಧಕರಿಗಿಂತ ಕಣ್ಣು ಹೊಡೆವ ವೀಡಿಯೋ ನಟಿ ಯುವಸಮಾಜಕ್ಕೆ ದೇವರಂತೆ ಕಂಡಿದ್ದಾಳೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ಶಿಕ್ಷೆ. ಹೋದರೆ ನನಗೆ ಹಿಂಸೆ. ಹೋಗದಿದ್ದರೆ ದುರಹಂಕಾರದ ಪಟ್ಟ ಎಂದು ತಾವು ಅನುಭವಿಸಿದ ಹಿಂಸೆಯ ಬಗ್ಗೆ ಹೇಳಿದ್ದಾರೆ.
ಕನ್ನಡ ಚಲನಚಿತ್ರ ನಿರ್ಮಾಪಕ ಸ್ನೇಹಿತ ಮಂಜು ಅವರು , ಅದು ಒಕ್ಕಲಿಗರ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಕ್ಕೆ ವಾರಿಯರ್ ನನ್ನು ಕರೆತಂದಿದಕ್ಕೆ ಆಶ್ಚರ್ಯ ಪಟ್ಟಿದ್ದಾರೆ.
'ಇನ್ನೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿರುವ ವಾರಿಯರ್ ಬರಹಗಾರ್ತಿಯಲ್ಲ, ಸ್ವಾತಂತ್ಯ್ರ ಹೋರಾಟಗಾರ್ತಿಯಲ್ಲ. ನೂರು ಸಿನಿಮಾ ನಟಿಸಿದ ನಟಿಯಂತು ಅಲ್ಲ. ಸಾಹಿತಿ ಅಲ್ಲ. ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆಯನ್ನು ನೀಡಿಲ್ಲ. ಅನಾಥ ಮಕ್ಕಳಿಗೆ ಮಹಾತಾಯಿ ಆಧುನಿಕ ಮದರ್ ತೆರೆಸಾ ಅಲ್ಲ. ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕನು ಅಲ್ಲ. ಕಾದಂಬರಿ ಬರೆದ ತ್ರಿವೇಣಿ ಅಲ್ಲ. ಜಾನ್ಸಿ, ಅಬ್ಬಕ್ಕ, ಕಿತ್ತೂರು ಚೆನ್ನಮ್ಮನಲ್ಲ. ಒಂದು ಸಾಮಾನ್ಯ ವೀಡಿಯೋ ಮಾಡಿ ಜಗ ಮೆಚ್ಚಿದ ಸಾಮಾನ್ಯ ಹೆಣ್ಣು ಮಗು. ಇಂಥ ಕ್ಷಣಿಕ ಹೆಸರು ಮಾಡಿದ ಆರಾಧಕರು ದೇಶದ ಸಂಸ್ಕೃತಿ, ತಂದೆ ತಾಯಿ ಭಾವನೆ ಉಳಿಸುವ ಯುವ ಸಮುದಾಯವೇ ಎಂಬ ಪ್ರಶ್ನೆ ನನ್ನ ಕಾಡುತ್ತಿದೆ' ಎಂದು ವಾರಿಯರ್ ಇಂತಹ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವಷ್ಟು ದೊಡ್ಡ ಸಾಧಕಿಯಲ್ಲ ಎಂಬ ತನ್ನ ಅಭಿಪ್ರಾಯ ತಿಳಿಸಿದ್ದಾರೆ.