ಮಂಗಳೂರು, ಅ 18 (DaijiworldNews/SM): ವೀರು ಟಾಕೀಸ್ ಅಂಡ್ ಲೈಲಾಕ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ `ಸವರ್ಣದೀರ್ಘ ಸಂಧಿ’ ಸಿನಿಮಾದ ಬಿಡುಗಡೆ ಸಮಾರಂಭ ಮಂಗಳೂರಿನ ಭಾರತ್ಮಾಲ್ನಲ್ಲಿರುವ ಬಿಗ್ ಸಿನೆಮಾಸ್ನಲ್ಲಿ ಅಕ್ಟೋಬರ್ 18ರ ಶುಕ್ರವಾರ ಜರುಗಿತು.
ಕೋಸ್ಟಲ್ವುಡ್ ಕಲಾವಿದ ಕುಸಲ್ದರಸೆ ನವೀನ್ ಡಿ ಪಡೀಲ್ ದೀಪ ಬೆಳಗಿಸುವ ಮೂಲಕ ‘ಸವರ್ಣದೀರ್ಘ ಸಂಧಿ’ ಚಲನಚಿತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ತುಳು ಸಿನಿಮಾ ಚಾಲಿಪೋಲಿಲು ಖ್ಯಾತಿಯ ನಿರ್ದೇಶಕ ವಿರೇಂದ್ರ ಶೆಟ್ಟಿ ನಿರ್ದೇಶಿಸಿ, ನಿರ್ಮಿಸಿ ನಟಿಸಿರುವ ಈ ವಿನೂತನ ಕನ್ನಡ ಚಲನಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಯುವಪ್ರತಿಭೆಗಳಿಗೆ ತುಳುನಾಡಿನ ಜನತೆಯೂ ಪ್ರೋತ್ಸಾಹ ನೀಡಬೇಕು. ಕರಾವಳಿಯ ಪ್ರತಿಭೆಗಳು ಬೆಳಗಲು ಯಶಸ್ವಿಯಾಗಲು ಈ ಚಿತ್ರವನ್ನು ಎಲ್ಲರೂ ಬೆಂಬಲಿಸಿ ಎಂದರು.
ಕಾರ್ಯಕ್ರಮದಲ್ಲಿ ನವರಸ ರಾಜೆ ಬಿರುದಾಂಕಿತ ನಟ ಭೋಜರಾಜ ವಾಮಂಜೂರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ನಟರಾದ ಗಿರೀಶ್, ಸುರೇಂದ್ರ ಬಂಟ್ವಾಳ್, ನಿರ್ಮಾಪಕ ಹರ್ಷಿಂಗ್ಟನ್ ಥೋಮಸ್, ಹಿರಿಯ ವಕೀಲ ಅರುಣ್ ಬಂಗೇರಾ, ಬಿಗ್ ಸಿನೆಮಾ ಚಿತ್ರಮಂದಿರದ ಮಾಲಕ ಬಾಲಕೃಷ್ಣ ಶೆಟ್ಟಿ, ಶ್ರೀಮತಿ ತಾರಾಕ್ಷಿ ವಿರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ಬಿ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.