ಮಂಗಳೂರು, ಅ 12 (Daijiworld News/MSP): 'ಕನಸ ಕಂಡರೆ ತಾನೇ ನನಸಾಗುವುದು.?', ಕಂಡ ಸಿನಿಮಾ ಕನಸನ್ನು ಬೆನ್ನತ್ತಿ ನನಸು ಮಾಡುವ ಭರವಸೆಯಲಿ ಹೊರಟಿದೆ ಕರಾವಳಿಯ ಯುವಕರ ತಂಡ. ಚಿತ್ರದ ಶೀರ್ಷಿಕೆಯೇ "ಕನಸು ಮಾರಾಟಕ್ಕಿದೆ".
ತುಳುನಾಡಿನ ಹಸಿರ ಸಮೃದ್ದಿಯ ಗಿರಿಶಿಖರದ ಮಧ್ಯೆದಲ್ಲೇ ಮಂಗಳೂರು ಕನ್ನಡದೊಂದಿಗೆ "ಯುವಜನತೆಗೆ ಸ್ಪೂರ್ತಿದಾಯವಾಗುವ ಕಾಮಿಡಿ ಥ್ರಿಲ್ಲರ್ " ಸಿನಿಮಾ ಸೆರೆಹಿಡಿಯುತ್ತಿದೆ ಸಿನಿಮಾ ಕನಸುಗಾರರ ತಂಡ.
ಅಂದ ಹಾಗೆ ’ಕನಸು ಮಾರಾಟಕ್ಕಿದೆ ’ಚಿತ್ರದ ನಿರ್ದೇಶನದ ಜವಾಬ್ದಾರಿಯು ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ಅವರ ಮೇಲಿದೆ. ಚಿತ್ರಕಥೆ ಸಂಭಾಷಣೆಯನ್ನು ಖ್ಯಾತಿಯ ಕಾಮಿಡಿ ಕಿಲಾಡಿ ಅನೀಶ್ ಪೂಜಾರಿ ಬರೆದಿದ್ದಾರೆ. ನವೀನ್ ಪೂಜಾರಿ ಚಿತ್ರದ ಕಥೆ ಹೆಣೆದಿದ್ದಾರೆ.ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಸಂಗೀತದ ಇಂಪು ನೀಡುತ್ತಿದ್ದಾರೆ. ಖ್ಯಾತ ಚಿತ್ರಸಾಹಿತಿ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಗೀತರಚನೆಕಾರ ನಾಗೇಂದ್ರ ಪ್ರಸಾದ್ , ಸುಕೇಶ್ ಇವರೆಲ್ಲರೂ ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ.
ಕನಸು ಮಾರಾಟ ಮಾಡುವ ನಾಯಕನಾಗಿ ಪ್ರಜ್ಞೇಶ್, ನಾಯಕಿ ಸ್ವಸ್ತಿಕ ನವ್ಯ ಪೂಜಾರಿ, ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ , ಧೀರಜ್ ನೀರುಮಾರ್ಗ, ಚಿದಂಬರ, ಸೂರ್ಯ ಕುಂದಾಪುರ , ಚೇತನ್ ರೈ ಮಾಣಿ, ಮೋಹನ್ ಶೇಣಿ,ಹೀಗೆ ಹಲವಾರು ಕಲಾವಿದರ ದಂಡೇ ಇದೆ.
ಚಿತ್ರ ತಂಡ ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಇದೀಗ ನವರಾತ್ರಿಯ ಬ್ರೇಕ್ ಮುಗಿಸಿ ಎರಡನೇ ಹಂತದ ಚಿತ್ರೀಕರಣವನ್ನು ಕೈಗೆತ್ತಿಕೊಂಡಿದೆ. ಚಿತ್ರದ ಚಿತ್ರೀಕರಣ ಮಂಗಳೂರು, ಮಲ್ಪೆ, ಬೆಳ್ತಂಗಡಿ, ಮಿತ್ತಬಾಗಿಲು, ಮೂಡುಬಿದ್ರೆ, ಮಿತ್ತಬಾಗಿಲು ಮುಂತಾದೆಡೆ ಸಾಗಲಿದೆ.