ಬೆಂಗಳೂರು, ಅ.08(Daijiworld News/SS): 511 ದಿನ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ್ದ ‘ಚಾಲಿಪೋಲಿಲು’ ತುಳು ಚಿತ್ರದ ಯಶಸ್ಸಿಗೆ ಮುನ್ನುಡಿ ಬರೆದಿದ್ದ ವೀರೇಂದ್ರ ಶೆಟ್ಟಿ ಅವರ ಮುಂದಿನ ಚಿತ್ರ ಹೇಗಿದ್ದೀತು..? ಎಂದು ತುಳುವರು ಜಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದರು. ಆದರೆ ಇದೀಗ ಕೋಸ್ಟಲ್ವುಡ್ ಬಿಟ್ಟು ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕನಾಗಿ ಮಾತ್ರವಲ್ಲ ನಟನಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ ಮಂಗಳೂರು ಮೂಲದ ಕಾವೂರು ನಿವಾಸಿ ವೀರೇಂದ್ರ ಶೆಟ್ಟಿ.
ಹೆಸರಿನಲ್ಲೇ ಅಚ್ಚರಿ ಮೂಡಿಸುವ ‘ಸವರ್ಣದೀರ್ಘ ಸಂಧಿ’ ಕನ್ನಡ ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆಗೊಳ್ಳಲು ತಯಾರಾಗಿದೆ. ಚಿತ್ರದ ನಾಯಕ ನಟನಾಗಿ ಕೃಷ್ಣಾ ಎನ್ನುವ ಬೆಡಗಿಯೊಂದಿಗೆ ವಿರೇಂದ್ರ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಪತ್ರಕರ್ತ ಅಜಿತ್ ಹನುಮಕ್ಕನವರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಟ್ಟು 7 ಹಾಡುಗಳಿದ್ದು, ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿದೆ.
ಸದ್ಯ ಟ್ರೈಲರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ‘ಸವರ್ಣ ದೀರ್ಘ ಸಂಧಿ’ ಚಿತ್ರದ ಹಾಡುಗಳು ಕೂಡಾ ಜನಪ್ರಿಯವಾಗುತ್ತಿದೆ. ಹಾಡುಗಳನ್ನು ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಾಹಿತಿ ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿದ್ದಾರೆ.
'ಸವರ್ಣ ದೀರ್ಘ ಸಂಧಿ’ ರೌಡಿಸಂ ಕಾಮಿಡಿ ಜಾನರ್ ಸಿನೆಮಾವಾಗಿದ್ದು, ಕಥಾ ನಾಯಕ ರೌಡಿ. ಕನ್ನಡ ವ್ಯಾಕರಣಕ್ಕೂ ರೌಡಿಗೂ ಏನು ಸಂಬಂಧ ಅನ್ನೋದೇ ಚಿತ್ರದ ಹೈಲೈಟ್ಸ್. ಸಿನೆಮಾವನ್ನು ವೀರೇಂದ್ರ ಶೆಟ್ಟಿ, ಮನೋಮೂರ್ತಿ, ಲುಷಿಗ್ಟಂನ್ ಥಾಮಸ್, ಹೇಮಂತ್ ಕುಮಾರ್ ಸೇರಿ ನಿರ್ಮಾಣ ಮಾಡಿದ್ದಾರೆ. ಆನೇಕಲ್, ಮೂಡಿಗೆರೆ, ದೇವರಾಯನ ದುರ್ಗ, ಜಿಗಣಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
‘ಕನ್ನಡದಲ್ಲಿ ಹೊಸಥರದ ಚಿತ್ರವನ್ನು ಮಾಡುವ ಯೋಚನೆಯಲ್ಲಿದ್ದಾಗ ಈ ಕಥೆ ಹೊಳೆಯಿತು. ಇದೊಂದು ಕಾಮಿಡಿ, ರೌಡಿಸಂ ಕಥಾಹಂದರವಿರುವ ಚಿತ್ರ. ಚಿತ್ರದ ಕಥೆ ವಿಭಿನ್ನವಾಗಿರುವುದರಿಂದ, ಅದಕ್ಕೆ ತಕ್ಕಂತೆ ಹಾಡುಗಳು ಕೂಡಾ ವಿಭಿನ್ನವಾಗಿ ಮೂಡಿಬಂದಿದೆ. ಹಾಡು ಕೇಳಿ ಮನಸೋಲೋದಂತೂ ಗ್ಯಾರಂಟಿ’ ಎಂದಿದ್ದಾರೆ ವೀರೇಂದ್ರ ಶೆಟ್ಟಿ.
ಮಲಯಾಳಂ ಚಿತ್ರ ‘ಉಸ್ತಾದ್ ಹೊಟೇಲ್’ ಖ್ಯಾತಿಯ ಲೋಕನಾಥನ್ ಶ್ರೀನಿವಾಸ್ ಛಾಯಾಗ್ರಹಣವಿದೆ. ಸುರೇಂದ್ರ ಬಂಟ್ವಾಳ್, ಪದ್ಮಜಾರಾವ್, ರವಿಭಟ್, ನಿರಂಜನ್ ದೇಶಪಾಂಡೆ ಪಾತ್ರವರ್ಗದಲ್ಲಿದ್ದಾರೆ. ಕರಾವಳಿ ಸೇರಿ ರಾಜ್ಯದಾದ್ಯಂತ ಅಕ್ಟೋಬರ್ 18ರಂದು ‘ಸವರ್ಣದೀರ್ಘ ಸಂಧಿ’ ತೆರೆ ಕಾಣಲಿದೆ.