ಕುಂದಾಪುರ: ಪ್ಲಾಸ್ಟಿಕ್ ನಲ್ಲಿ ಬಂಧಿಯಾದ ಭೂದೇವಿಯ ನೋವನ್ನ ಕಟ್ಟಿಕೊಟ್ಟ 'ವಂದೇ ಮಾತರಂ'
Fri, Oct 04 2019 05:05:34 PM
ಕುಂದಾಪುರ, ಅ 4 (Daijiworld News/RD): ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದರೂ ಸಹ ಅದನ್ನೇ ಮಿತಿಮೀರಿ ಬಳಸುತ್ತಿದ್ದು, ಇದರ ವಿರುದ್ದ ಹಲವಾರು ಕ್ರಮ ಕೈಗೊಂಡರೂ ಕೂಡ ಪ್ಲಾಸ್ಟಿಕ್ ಬಳಕೆಯಂತೂ ಕಡಿಮೆ ಆಗಿಲ್ಲ, ಹಾಗಾಗಿ ಈ ಪ್ಲಾಸ್ಟಿಕ್ ಬಳಕೆಯ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಲು ಕುಂದಾಪುರದ ಯುವಜನತೆಯ ತಂಡವೊಂದು ಮುಂದಾಗಿದ್ದು, ಇದೀಗ "ದಿ ಟೇಲ್ ಆಫ್ ವಂದೇ ಮಾತರಂ" ವಿಡಿಯೋ ಸಾಂಗ್ ಬಿಡುಗಡೆಗೊಂಡಿದ್ದು, ಈ ವಿಡಿಯೋಗೆ ಜನರು ದಂಗಾಗಿದ್ದಾರೆ
ಪ್ಲಾಸ್ಟಿಕ್ ಅನ್ನೋ ಮಹಾಮಾರಿಯಿಂದ ನಮ್ಮ ಭೂಮಿಗೆ ಯಾವೆಲ್ಲಾ ರೀತಿಯಿಂದ ಹಾನಿಯಾಗುತ್ತೆ ಎನ್ನುವ ಪರಿಕಲ್ಪನೆಯ ಹೊತ್ತು ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ಮಾಲಿನ್ಯ, ಸ್ವಚ್ಛತೆ ಹಾಗೂ ಜಲಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ "ಕ್ಲೀನ್ ಕುಂದಾಪುರ ಪ್ರಾಜೆಕ್ಟ್" ಇದೀಗ ಪ್ಲಾಸ್ಟಿಕ್ ನಿರ್ಮೂಲನೆ ಕುರಿತಾಗಿ ಈ ವೀಡಿಯೋವನ್ನು ರೂಪಿಸಿದೆ. ಈಗಾಗಲೆ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ವಿರುದ್ದ ಸಮರ ಸಾರಿದ್ದು, ಇದಕ್ಕೆ ಈ ವಿಡಿಯೋ ಸಾಥ್ ನೀಡಿದೆ.
VFX ತಂತ್ರಜ್ಞಾನ ಉಪಯೋಗಿಸಿಕೊಂಡು, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಟೀಮ್ ಹಾಗೂ ಲೈಫ್ಲೈಕ್ ಪ್ರೊಡಕ್ಷನ್ ಸಹಯೋಗದಲ್ಲಿ ಎರಡೂವರೆ ನಿಮಿಷಗಳ ಈ ವೀಡಿಯೋ ತಯಾರಾಗಿದೆ. ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಅವರ ಮೂಲ ವಂದೇ ಮಾತರಂ ಹಾಡನ್ನು ಬಳಕೆ ಮಾಡಿಕೊಂಡು ದೇಶಭಕ್ತಿಗೀತೆಗೆ ಪರ್ಯಾಯವಾಗಿ ಭೂಮಿ ಭಕ್ತಿಗೀತೆಯನ್ನಾಗಿ ರೂಪಿಸಲಾಗಿದೆ. ಅಕ್ಷತಾ ಹಾವಂಜೆ ಅವರ ಸುಮಧುರ ಕಂಠದಲ್ಲಿ ಮೂಡಿ ಬಂದಿರುವ ಸಂಗೀತಕ್ಕೆ ಡೇನಿಯಲ್ ಮತ್ತು ಸುಹಿತ್ ಸಾಹಿತ್ಯ ರಚಿಸಿದ್ದಾರೆ.
ಈ ವೀಡಿಯೋದಲ್ಲಿ ಭೂಮಿ(ಕಥಾ ನಾಯಕಿ), ಖಳನಾಯಕ(ಪ್ಲಾಸ್ಟಿಕ್) ಎಂಬ ಹೊಸ ಜೀವಿಯ ಕೃತ್ಯಕ್ಕೆ ಬಲಿಯಾಗಿ ತನ್ನತನವನ್ನು ಕಳೆದುಕೊಳ್ಳುತ್ತಾ ರೋಗಿಯಾಗುತ್ತಾಳೆ. ಭೂಮಿ ಕಾಯುವ ದೈವ (ತುಳುನಾಡಿನ ದೈವ)ವಾಗಿದ್ದು. ಭೂಮಿಯು ಪ್ಲಾಸ್ಟಿಕ್ ನಿಂದ ಸೋತು ಬಂಧಿಯಾಗಿ ನರಳುತ್ತಾಳೆ. ಅವಳನ್ನು ಪ್ಲಾಸ್ಟಿಕ್ ಕೂಪದಿಂದ ಬಿಡಿಸುವ ಹೋರಾಟಕ್ಕೆ ದೈವ ಬರುತ್ತಾನೆ. ಈ ಮೂರು ಪಾತ್ರಗಳ ಪರಿಚಯ ವಂದೇ ಮಾತರಂ ಹಾಡಿನ ಉದ್ದಕ್ಕೂ ಆಗುತ್ತದೆ. ಭೂಮಿ ಪಾತ್ರಕ್ಕೆ ಗ್ರೀಕ್ ದೇವತೆಯಂತೆ, ಭೂಮಿ ಕಾಯುವ ದೈವಕ್ಕೆ ಕರಾವಳಿ ದೈವದಂತೆ ವಿನ್ಯಾಸಗೊಳಿಸಲಾಗಿದೆ. ಪ್ಲಾಸ್ಟಿಕ್ ಪಾತ್ರಕ್ಕೆ ಕೈಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಶ್ರುತಿ ಜೈನ್, ಸತ್ಯ ಮಂಜ ಎಂಬುವರು ನಟಿಸಿದ್ದಾರೆ.