ಮಂಗಳೂರು, ಸೆ 28 (Daijiworld News/RD): ತುಳು ಚಿತ್ರ ನಿರ್ಮಾಪಕ ಮುಖೇಶ್ ಹೆಗ್ಡೆ ನಿರ್ಮಿಸುತ್ತಿರುವ, ಅಕ್ಷಿತ್ ಶೆಟ್ಟಿ ಹಾಗೂ ಅರ್ಜುನ್ ಲೂಯಿಸ್ ನಿರ್ದೇಶಿಸಿರುವ ‘ಲುಂಗಿ’ ಚಿತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದು, ಚಿತ್ರವು ತನ್ನ ಟ್ರೈಲರ್ ಮೂಲಕವೇ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಇದೀಗ ಚಿತ್ರ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದು ಅಕ್ಟೋಬರ್ 11 ರಂದು ಲುಂಗಿ ಎತ್ತಿ ಕಟ್ಟಲು ತಯಾರಾಗಿದೆ.
“ಲುಂಗಿ’ ಚಿತ್ರವನ್ನು ಮಂಗಳೂರು ಭಾಗದ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರವಾಗಿದ್ದು, ಜತೆಗೆ ಇಲ್ಲಿ ಮಂಗಳೂರು ಭಾಷೆ, ಅಲ್ಲಿನ ಸಂಸ್ಕೃತಿ, ಸೊಗಡು ಮತ್ತು ಸೊಬಗನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಇತ್ತೀಚೆಗಷ್ಟೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 'ಲುಂಗಿ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು, ಸಿನಿ ರಸಿಕರಿಂದ ಇದಕ್ಕೆ ಉತ್ತಮ ಪ್ರಶಂಸೆ ಕೂಡ ಪಡೆದುಕೊಂಡಿದೆ. ಇನ್ನು ಸಿನಿಮಾದ 'ನಗಬೇಡ ಅಂದೆ ನಾನು' ಎಂಬ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಈ ಹಾಡಿಗೆ ಖ್ಯಾತ ಬಾಲಿವುಡ್ ಸಿಂಗರ್ ಅರ್ಮಾನ್ ಮಲಿಕ್ ಹಾಗೂ ಶ್ವೇತಾ ಮೋಹನ್ ಕಂಠ ಸಿರಿಯಲ್ಲಿ ಮೂಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ಸಾಕಷ್ಟು ಸದ್ದು ಮಾಡಿದೆ. ಈ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯ ಬರೆದರೆ, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.
ಲುಂಗಿ ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಇನ್ನೊಂದು ಮುಖ್ಯ ವಿಷಯವೆಂದರೆ, ಮೇಕ್ ಇನ್ ಇಂಡಿಯಾ ಎಂಬ ಕಾನ್ಸೆಪ್ಟ್ ಕೂಡ ಚಿತ್ರದ ಹೈಲೈಟ್ಗಳಲ್ಲೊಂದು. ಚಿತ್ರದ ಬಗ್ಗೆ ಹೇಳುವುದಾದರೆ, ಈಗಿನ ಜನರೇಷನ್ನ ಪ್ರತಿಯೊಬ್ಬರೂ ಡಿಗ್ರಿ ಮೇಲೆ ಡಿಗ್ರಿ ಮಾಡಿಕೊಂಡಿದ್ದಾರೆ. ಅಂಥವರು ಸಾಕಷ್ಟು ಉದ್ಯಮಿಗಳ ಕೆಳಗೆ ದುಡಿಮೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಲಸ ಅರಸಿ ವಿದೇಶಕ್ಕೂ ಹೋಗಿದ್ದಾರೆ. ಕೆಲಸ ದೊಡ್ಡದೇ ಇರಲಿ, ಚಿಕ್ಕದಾಗಿರಲಿ, ನಿಮ್ಮೂರಲ್ಲೇ ಮಾಡಿ ಎಂಬ ಸಂದೇಶದ ಜೊತೆಗೆ ನಾಡು, ನುಡಿ ಸಂಸ್ಕೃತಿ ಕುರಿತಾಗಿಯೂ ಹೇಳಲಾಗಿದೆ ಎಂದು ಚಿತ್ರದ ನಿರ್ದೇಶಕ ಅಜುನ್ ಲೂಯಿಸ್ ಚಿತ್ರದ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಪ್ರಣವ್ ಹೆಗ್ಡೆ ಹಾಗೂ ನಾಯಕಿಯರಾಗಿ ಅಹಲ್ಯ ಸುರೇಶ್, ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡುಗ ಧಾರವಾಹಿಯ ರಾಧಿಕಾ ರಾವ್ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅನೇಕ ತುಳು ಚಿತ್ರರಂಗದ ಕಲಾವಿದರು ಕೂಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಇದೆ.