ಮಂಗಳೂರು, ಸೆ 21 (Daijiworld News/RD): ತುಳುನಾಡಿನ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ’ಜಬರ್ದಸ್ತ್ ಶಂಕರ’ ತೆರೆಕಾಣಲು ಸಜ್ಜಾಗಿದ್ದು, ಮುಂದಿನ ತಿಂಗಳು ತೆರೆಗಪ್ಪಳಿಸುವ ಸಾಧ್ಯತೆ ಇದೆ.
ಈಗಾಗಲೇ ಚಿತ್ರತಂಡವು ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು, ಇದೀಗ ಹಾಡಿನ ಕೊನೆಯ ದೃಶ್ಯಗಳ ಶೂಟಿಂಗ್ಗೆ ಪ್ಲ್ಯಾನ್ ಹಾಕಿಕೊಂಡಿದೆ. ಹಾಡಿನ ಚಿತ್ರೀಕರಣ ಒಂದೆರಡು ದಿನದೊಳಗೆ ಪೂರ್ಣಗೊಳ್ಳಲಿದ್ದು, ವಿಭಿನ್ನ ಶೈಲಿಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ.
ಜಲನಿಧಿ ಫಿಲ್ಮ ನಡಿ ಮೂಡಿ ಬಂದ ಜಬರ್ದಸ್ತ್ ಶಂಕರ, ಇನ್ನು ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನವನ್ನು ದೇವದಾಸ್ ಕಾಪಿಕಾಡ್ ಮಾಡಿದ್ದು, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದ್ದು, ಸುಜೀತ್ ನಾಯಕ್ ಅವರ ಸಂಕಲನವಿದೆ.
ಇನ್ನು ಚಿತ್ರದಲ್ಲಿ ಜಬರ್ದಸ್ತ್ ಶಂಕರನಾಗಿ ಕೋಸ್ಟಲ್ವುಡ್ ಡೈನಾಮಿಕ್ ಹೀರೋ ಎಂದೇ ಖ್ಯಾತಿಯಾಗಿರುವ ಅರ್ಜುನ್ ಕಾಪಿಕಾಡ್ ಅಭಿನಯಿಸಿದ್ದು, ವಿಭಿನ್ನ ಲುಕ್ನಲ್ಲಿ ಜಬರ್ದಸ್ತಾಗಿ ಎಂಟ್ರಿಯಾಗಲಿದ್ದಾರೆ. ಇದೊಂದು ವಿಭಿನ್ನ ಕಥೆಯ ಸಿನೆಮಾ. ಹೊಸ ಪರಿಕಲ್ಪನೆಯಲ್ಲಿ ಮೇಕಿಂಗ್ ಮಾಡಲಾಗಿದೆ ಎಂದು ಹೇಳುವ ಅವರು, ಈಗಾಗಲೇ ತುಳು ಮತ್ತು ಕನ್ನಡದ ಸೇರಿದಂತೆ 15 ಸಿನೆಮಾಗಳಲ್ಲಿ ನಟಿಸಿರುತ್ತಾರೆ.
ಸಾಯಿಕೃಷ್ಣ, ಸತೀಶ್ ಬಂದಲೆ, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸರೋಜಿನಿ ಶೆಟ್ಟಿ ಸಹಿತ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ.