ಮಂಗಳೂರು, ಸೆ 17 (Daijiworld News/RD): ಗಿರಿಗಿಟ್ ಚಿತ್ರದಲ್ಲಿ ನ್ಯಾಯಾಂಗ ನಿಂದನೆ ಮತ್ತು ವಕೀಲ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಮಂಗಳೂರು ವಕೀಲರ ಸಂಘವು ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣವು ಸುಖಾಂತ್ಯಗೊಂಡಿದೆ.
ಈ ಕುರಿತು ನಗರದ ಪ್ರಸ್ ಕ್ಲಬ್ ನಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ವಕೀಲರ ಸಂಘ ಹಾಗೂ ಚಿತ್ರತಂಡ. ಈ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಚಿತ್ರತಂಡ ತನ್ನ ತಪ್ಪನ್ನು ಅರಿತುಕೊಂಡಿದೆ ಮತ್ತು ತಪ್ಪಿಗೆ ಕ್ಷಮೆಯಾಚಿಸಿದೆ. ಅಲ್ಲದೆ ಚಿತ್ರದಲ್ಲಿ ಇರುವಂತಹ ನ್ಯಾಯಾಂಗ ಹಾಗೂ ನ್ಯಾಯಾವಾದಿಗಳ ಅಪಹಾಸ್ಯಕರ ಅಶ್ಲೀಲ ಸಂಭಾಷಣೆಗಳನ್ನು ಮ್ಯೂಟ್ ಗೊಳಿಸಿ ಹಾಗು ಕೆಲವು ದೃಶ್ಯಗಳನ್ನು ಅಳಿಸುವುದಾಗಿ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಮಾಣದನ್ವಯ ನಿಗದಿತ ಕಾಲಾವಾಕಾಶದೊಳಗೆ ಚಿತ್ರ ತಂಡವು ಷರತ್ತುಗಳನ್ನು ಪೂರೈಸಿದ ಬಳಿಕ ವಕೀಲರ ಸಂಘವು ದಾವೆಯನ್ನು ಹಿಂಪಡೆಯುವುದೆಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದರು.
ಮಂಗಳೂರು ವಕೀಲರ ಸಂಘವು ಬಹಳಷ್ಟು ಕಲಾವಿದರನ್ನು ಹೊಂದಿದ್ದು, ತುಳುನಾಡಿನ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದು, ಗಿರಿಗಿಟ್ ಚಲನಚಿತ್ರಕ್ಕೆ ಹಾನಿ ಉಂಟು ಮಾಡುವ ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮತ್ತು ನ್ಯಾಯವಾದಿಗಳ ಘನತೆಯನ್ನು ಎತ್ತಿ ಹಿಡಿಯುವ ಸದುದ್ದೇಶ ಮಾತ್ರ ಮಂಗಳೂರು ವಕೀಲರ ಸಂಘ ಹೊಂದಿದ್ದು ಆ ನಿಟ್ಟಿನಲ್ಲಿ ವಕೀಲರ ಸಂಘ ಸದಾ ಕಾರ್ಯ ಪ್ರವೃತ್ತವಾಗಿರುತ್ತದೆ ಎಂದರು. ಗಿರಿಗಿಟ್ ಚಿತ್ರ ಶತದಿನ ಪೂರೈಸಲಿ ಎಂದು ಮಂಗಳೂರು ವಕೀಲರ ಸಂಘ ಹಾರೈಸುತ್ತದೆ ಎಂದರು.
ಗಿರ್ ಗಿಟ್ ಚಿತ್ರದ ನಿರ್ದೇಶಕ ರೂಪೇಶ್ ಶೆಟ್ಟಿ, "ಈ ಪ್ರಕರಣವನ್ನು ಸಕಾರಾತ್ಮಕವಾಗಿ ಇತ್ಯರ್ಥಪಡಿಸಲಾಗಿದೆ. ಈ ಚಿತ್ರದಲ್ಲಿ ವಕೀಲ ವೃತ್ತಿಯನ್ನು ಮತ್ತು ಅವರನ್ನು ನೋಯಿಸುವ ಉದ್ದೇಶ ಇರಲಿಲ್ಲ. ವಕೀಲರ ಸಂಘದ ಷರತ್ತಿನಂತೆ ಸಂಭಾಷಣೆಗಳನ್ನು ಮ್ಯೂಟ್ ಮಾಡಲು ಮತ್ತು ಆಕ್ಷೇಪಾರ್ಹ ದೃಶ್ಯಗಳನ್ನು ಅಳಿಸಿದ್ದೇವೆ ಎಂದರು. ಇದೀಗ ಪ್ರಕರಣ ಸುಖಾಂತ್ಯ ಕಂಡಿದ್ದು, ಎಲ್ಲರ ನೆರವಿನಲ್ಲಿ ಶತದಿನೋತ್ಸವದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಹಿರಿಯ ನ್ಯಾಯವಾದಿ ಎಂ.ಪಿ.ಶೆಣೈ, ಉಪಾಧ್ಯಕ್ಷರಾದ ಬಿ.ಜಿನೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಹೆಚ್.ವಿ., ಗಿರಿಗಿಟ್ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅತ್ತಾವರ್ ಇನ್ನಿತರರು ಉಪಸ್ಥಿತರಿದ್ದರು.