ಸಾಕು ಪ್ರಾಣಿಗಳಿಗೆ ಆಸರೆಯ ಸೂರು ಕಟ್ಟಲು ಮುಂದಾದ ಅನುಪ್ ಸಾಗರ್
Sun, Sep 15 2019 05:24:20 PM
ಮಂಗಳೂರು, ಸೆ 15 (Daijiworld News/RD): ಕಲಾವಿದನಾಗಿ ಕೇವಲ ನಟನೆಯಲ್ಲಿ ಮಾತ್ರ ತನ್ನನ್ನು ತಾನು ಗುರುತಿಸಿಕೊಳ್ಳದೆ, ಸಮಾಜಕ್ಕೆ ತಮ್ಮಿಂದೇನಾದರು ಸಹಾಯ ಮಾಡುವ ಎಂಬ ಕನಸು ಹೊತ್ತು ಅದಕ್ಕಾಗಿ ಶ್ರಮಿಸುತ್ತಿರುವ ಅಪರೂಪದ ಕಲಾವಿದ ಅನುಪ್ ಸಾಗರ್.
ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಇವರು, ಕೋಸ್ಟಲ್ ವುಡ್ ನ ನಿರೆಲ್, ಅರ್ಜುನ್ ವೆಡ್ಸ್ ಅಮೃತ, ಏರಾ ಉಲ್ಲೇರ್, ನಿಷ್ಕೃಶ, ಮಾಯಾಕನ್ನಡಿ ಚಿತ್ರದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದಾರೆ. ತುಳು ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಛಲವಾದ ನಿರ್ಧಾರದಿಂದ ಕೋಸ್ಟಲ್ ವುಡ್ ಗೆ ಎಂಟ್ರಿಯಾದ ಇವರು, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ವಿಭಿನ್ನ ಚಿಂತನೆಗಳನ್ನು ಒಳಗೊಂಡಿರುವ ಇವರು ಸಮಾಜ ಸೇವೆ ತುಡಿತ ಹೊಂದಿದ್ದಾರೆ. ಸಮಾನ ಮನಸ್ಕ ಸ್ನೇಹಿತರೊಂದಿಗೆ ಸೇರಿ, ಬೀದಿ ಪ್ರಾಣಿಗಳಿಗೆ, ಬೀದಿ ನಾಯಿಗಳಿಗೆ ಆಶ್ರಯ ನೀಡವ ಕನಸನ್ನು ಹೊಂದಿದ್ದಾರೆ. ಅವುಗಳಿಗೂ ಕೂಡ ನಮ್ಮಂತೆ ಜೀವ ಇದೆ, ಹಾಗಾಗಿ ಅವುಗಳನ್ನು ಕಾಪಾಡಬೇಕು ಎಂದು ಹೇಳುವ ಅವರು ಆ ಜೀವಗಳಿಗೆ ಆಸರೆ ನೀಡಲು ಸೂರನ್ನು ಒದಗಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ವರ್ಷದಲ್ಲಿ ಪ್ರಾಣಿಗಳಿಗೂ ಆಶ್ರಯಧಾಮ ಸಿದ್ದವಾಗುತ್ತದೆ ಅನ್ನುತ್ತಾರೆ ಅನುಪ್ ಸಾಗರ್. ಇದರೊಂದಿಗೆ ವಿದ್ಯಾರ್ಥಿಗಳಿಗೆ ವೃತ್ತಿ ಜೀವನದ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ದಾರಿದೀಪವಾಗುವ ನಿಟ್ಟಿನಲ್ಲಿ ಎನ್ ಜಿ ಒಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಹುಮ್ಮಸ್ಸಿನಲ್ಲಿದ್ದಾರೆ.. ಈ ಮೂಲಕ ಮಕ್ಕಳ ಮನಸ್ಸಿನಲ್ಲಿ ಹೊಸ ಕನಸುಗಳ ಚಿಗುರೊಡೆಯಲು ಸಜ್ಜಾಗಿದ್ದಾರೆ.