ಮಂಗಳೂರು, ಸೆ 11 (Daijiworld News/MSP): ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ, "ಮದಿಪು", "ಪ್ರವೇಶ" ಚಿತ್ರದ ಬಳಿಕ ಇದೀಗ ಮತ್ತೊಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದಾರೆ. ಈಗಾಗಲೇ ಇನ್ನು ಹೆಸರಿಡದ ,ಚೇತನ್ ಅವರ ಮೂರನೇ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು , ಸೆ. 3 ರಂದು ಸೌತಡ್ಕ ಚಿತ್ರದ ಮಹೂರ್ತ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.
" ತಾಯಿ ಮಗುವಿನ ಬಾಂಧವ್ಯ ಮತ್ತು ಆಟಿಸಂ ಖಾಯಿಲೆಯೇ ತನ್ನ ಮೂರನೇ ಚಿತ್ರದ ಪ್ರಮುಖ ಕಥಾ ವಸ್ತು. ಇದೊಂದು ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರವೂ ಹೌದು" ಎಂದು ಚಿತ್ರದ ಬಗ್ಗೆ ವಿವರಿಸುತ್ತಾರೆ ನಿರ್ದೇಶಕರು. ಚಿತ್ರದ ಚಿತ್ರೀಕರಣ ಸುಮಾರು 35 ದಿನಗಳ ಅವಧಿಯಲ್ಲಿ ಮಡಂತ್ಯಾರು, ಮಂಗಳೂರು, ಮಡಿಕೇರಿ, ಬೆಂಗಳೂರು ಮುಂತಾದೆಡೆ ಸಾಗಲಿದೆ.
ಚಿತ್ರದ ನಾಯಕ ನಟನಾಗಿ ಅನೂಪ್ ಸಾಗರ್, ನಾಯಕಿಯಾಗಿ ಜೋಗುಳ ಧಾರವಾಹಿಯ ಜ್ಯೋತಿ ರೈ, ಆಟಿಸಂ ಪೀಡಿತ ಮಗುವಾಗಿ ಚಲನಚಿತ್ರ ರಂಗಕ್ಕೆ ಹೊಸ ಪರಿಚಯ ಧನಿಕ ಹೆಗ್ಡೆ , ಚೇತನ್ ರೈ ಮಾಣಿ, ಇಳಾ ವಿಟ್ಲಾ , ರಂಗಿತರಂಗ ಚಲನಚಿತ್ರ ಕಲಾವಿದ ಅರವಿಂದ್ ರಾವ್ ಮತ್ತು ಕಿರುತೆರೆ ಕಲಾವಿದ ಶ್ರೀಕಾಂತ್ ಹೆಬ್ಲಿಕರ್ ಹಲವು ಕಿರುತೆರೆ ಕಲಾವಿದರು ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಚಿತ್ರದ ಕತೆ ಮತ್ತು ನಿರ್ಮಾಣ ಡಾ. ಸರಸ್ವತಿ ಹೊಸದುರ್ಗ ಹಾಗೂ ಕವಿತಾ ಸಂತೋಷ್ ಇವರದ್ದಾಗಿದೆ
ಒಂದು ಅಂದಾಜು ಪ್ರಕಾರ ಆಟಿಸಂ ಎನ್ನುವ ಖಾಯಿಲೆ ವಿಶ್ವಾದ್ಯಂತ ಕನಿಷ್ಠ 70 ಮಿಲಿಯನ್ ಮಕ್ಕಳಲ್ಲಿ ಕಂಡುಬರುತ್ತಿದ್ದು, ಭಾರತದಲ್ಲಿ 10 ಮಿಲಿಯನ್ ಮಕ್ಕಳಿದ್ದಾರೆ. ಸಿನಿಮಾದಲ್ಲಿ ಆಟಿಸಂ ಖಾಯಿಲೆಯನ್ನು ಎಳೆ ಎಳೆಯಾಗಿ ತೆರೆದಿಡುವ ಪ್ರಯತ್ನ ಮಾಡಲಿದ್ದೇವೆ ಎನ್ನುತ್ತಾರೆ ನಿರ್ದೇಶಕ ಚೇತನ್ ಮುಂಡಾಡಿ. ಚಿತ್ರಕ್ಕೆ ಎ.ಪಿ ಅರ್ಜುನ್ - ಸಾಹಿತ್ಯವಿರಲಿದ್ದು , ಸಂಭಾಷಣೆಕಾರರಾಗಿ ವಿನೂ ಬಳಂಜ, ಛಾಯಾಗ್ರಹಕರಾಗಿ ಗಣೇಶ್ ಹೆಗ್ಡೆ, ಹೊಸ ಪ್ರತಿಭೆ ಹರ್ಷವರ್ಧನ ಅವರ ಸಂಗೀತವಿರಲಿದೆ.