ಬೆಂಗಳೂರು,ಸೆ 06 (Daijiworld News/RD): ದೇಶಾದ್ಯಂತ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ಇನ್ನು ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಸಾಕಷ್ಟು ಜನರಿಂದ ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸ್ಯಾಂಡಲ್ವುಡ್ ನಟಿ ಸೋನು ಗೌಡ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.
ಸೋನು ಗೌಡ ಅವರು ತಮ್ಮ ಟ್ವಿಟ್ಟರಿನಲ್ಲಿ, ’ಮುಖ್ಯಮಂತ್ರಿಗಳೇ, ನೀವು ದಂಡ ವಿಧಿಸುವ ಮೊದಲು ದಯವಿಟ್ಟು ನೀವು ಸರಿಯಾದ ರಸ್ತೆಗಳನ್ನು ನೀಡುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಸಾಮಾನ್ಯ ಜನರು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣ, ದಯವಿಟ್ಟು ಅವರ ಜೀವನವನ್ನು ಹಾಳು ಮಾಡಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ, ಸೋನುಗೌಡ ಅವರು ಸವಾರನೊಬ್ಬ ಬೈಕಿನಿಂದ ಬೀಳುತ್ತಿರುವ ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ, ಕುಡಿದು ಚಾಲನೆ – 10,000 ರೂ., ಜಂಪಿಂಗ್ ಟ್ರಾಫಿಕ್ ಲೈಟ್- 5,000 ರೂ., ಮೊಬೈಲ್ ಫೋನ್ ಬಳಕೆ – 5,000 ರೂ., ಅತಿವೇಗ – 5,000ರೂ ಹಾಗೂ ಸೀಟ್ಬೆಲ್ಟ್ ಧರಿಸದಿದ್ದರೆ – 1,000 ರೂ. ಹಾಗೂ ರಸ್ತೆಯಲ್ಲಿ ನಾವು ನೋಡಿದ ಗುಂಡಿಗಳಿಗೆ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕು ಎಂದು ಪ್ರಶ್ನಿಸಿದ್ದಾರೆ, ಸಂಚಾರಿ ನಿಯಮವನ್ನು ಕಠಿಣಗೊಳಿಸುವ ಮೊದಲು ದಯವಿಟ್ಟು ಯೋಗ್ಯ ರಸ್ತೆಯನ್ನು ಕಲ್ಪಿಸಿ ಎಂದಿದ್ದಾರೆ.
ಈ ಹಿಂದೆ ರಸ್ತೆ ಗುಂಡಿಗಳಲ್ಲಿ, ನಿಂತ ನೀರಿನಲ್ಲಿ ಸ್ವಿಮ್ಮಿಂಗ್ ಪೂಲ್ ರೀತಿ ಮಾಡಿ, ಮತ್ಸ್ಯ ಕನ್ಯೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಸಂಬಂಧಪಟ್ಟವರಿಗೆ ಎಚ್ಚರಿಕೆಯನ್ನು ನೀಡಿದ್ದರು.